17ಕ್ಕೆ ಕುಶಾಲನಗರ ಯುಜಿಡಿ ಪ್ರಾಯೋಗಿಕ ಚಾಲನೆ

17ಕ್ಕೆ ಕುಶಾಲನಗರ ಯುಜಿಡಿ ಪ್ರಾಯೋಗಿಕ ಚಾಲನೆ
Published on

ಕೆ.ಎಸ್.ನಾಗೇಶ್ ಕುಶಾಲನಗರ
ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಲು ಉದ್ದೇಶಿಸಿರುವ 71.60 ಕೋಟಿ ರೂ. ವೆಚ್ಚದ ಯುಜಿಡಿ ಕಾಮಗಾರಿಗೆ ಮೇ 17ರಂದು ಪ್ರಾಯೋಗಿಕವಾಗಿ ಚಾಲನೆ ನೀಡಲು ಒಳಚರಂಡಿ ಮಂಡಳಿ ಸಿದ್ಧತೆ ನಡೆಸಿದೆ.

2012ರಲ್ಲಿ ಯೋಜನೆಗೆ ಅನುಮತಿ ದೊರೆತ್ತಿದ್ದು, 2014ರಲ್ಲಿ 40.10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದ್ದು, ಇದೀಗ 12 ವರ್ಷಗಳ ನಂತರ ಕಾಮಗಾರಿಗೆ ಚಾಲನೆ ದೊರಕುತ್ತಿದೆ. ಕುಶಾಲನಗರದ 71 ಕಿಮೀ ವ್ಯಾಪ್ತಿಯಲ್ಲಿ ಪೈಪ್‌ಲೈನ್, 2600 ಮ್ಯಾನ್ ಹೋಲ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಸಾರಿಗೆ ಬಸ್ ನಿಲ್ದಾಣ ಮತ್ತು ಹಳೇ ಮಾರುಕಟ್ಟೆ ಸಮೀಪದಲ್ಲಿ ತೇವ ಬಾವಿ ನಿರ್ಮಾಣ ಮಾಡಲಾಗಿದ್ದು, ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ.

ಜಾಗ ಒತ್ತುವರಿಯಾಗಿರುವ ಕಾರಣ ಪಂಪಿಂಗ್ ಮಷಿನ್ ಅಳವಡಿಸುವ ಕಾಮಗಾರಿ ವಿಳಂಬವಾಗಿತ್ತು. 2020ರಲ್ಲಿ ಸ್ಥಳೀಯ ಆಡಳಿತ ಮಂಡಳಿ ಪರ್ಯಾಯ ಜಾಗ ಒದಗಿಸಿದ ನಂತರ ಸರ್ಕಾರದಿಂದ ಹೆಚ್ಚುವರಿ 18.40 ಕೋಟಿ ರೂ. ಬಿಡುಗಡೆಗೊಳಿಸಿ ಮಲೀನ ಶುದ್ಧೀಕರಣ ಘಟಕ ಹಾಗೂ ತೇವ ಬಾವಿಗೆ ಪಂಪಿಂಗ್ ಮಷಿನ್ ಅಳವಡಿಸಲಾಗಿದೆ.

ಈ ಯೋಜನೆಗೆ ಒಟ್ಟು 3 ತೇವ ಬಾವಿಗಳ ಅವಶ್ಯಕತೆ ಇದ್ದು, ಗುಮ್ಮನಕೊಲ್ಲಿ ಭಾಗದಲ್ಲಿ ಇನ್ನೊಂದು ತೇವ ಬಾವಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. 2022ರ ಮಾರ್ಚ್‌ನಲ್ಲಿ ಸ್ಥಳೀಯ ಆಡಳಿತ ಮಂಡಳಿ 20 ಸೆಂಟ್ ಜಾಗವನ್ನು ಖರೀದಿಸಿ ಒಳಚರಂಡಿ ಮಂಡಳಿಗೆ ಹಸ್ತಾಂತರ ಮಾಡಿದೆ. ಆದರೆ, ತೇವ ಬಾವಿ ನಿರ್ಮಾಣ ಕಾಮಗಾರಿ ಟೆಂಡರ್‌ನಲ್ಲಿ ಒಬ್ಬ ಗುತ್ತಿಗೆದಾರ ಮಾತ್ರ ಭಾಗವಹಿಸಿರುವುದರಿಂದ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದೆ ಈಗ ರೀ ಟೆಂಡರ್ ಕರೆಯಲಾಗಿದ್ದು, ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡ ನಂತರ ಗುತ್ತಿಗೆದಾರರನ್ನು ಆಯ್ಕೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಈ ತೇವ ಬಾವಿಗೆ 12 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ.

3500 ಮನೆಗಳಿಗೆ ಯೋಜನೆ ಲಾಭ: ಕುಶಾಲನಗರ ಪಟ್ಟಣ ವ್ಯಾಪ್ತಿಯ 3500 ಮನೆಗಳು ಸದ್ಯಕ್ಕೆ ಯೋಜನೆಯ ಲಾಭ ಪಡೆಯ ಲಾಭ ಪಡೆದುಕೊಳ್ಳಲಿದ್ದಾರೆ. ಮೇ 7ರಂದು ಪ್ರಾಯೋಗಿಕವಾಗಿ ಚಾಲನೆ ನೀಡಿ ಮಷಿನ್‌ಗಳ ಕಾರ್ಯನಿರ್ವಹಣೆಯ ಬಗ್ಗೆ ಪರಿಶೀಲಿಸಲಾಗುವುದು. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಒಳಚರಂಡಿ ಮಂಡಳಿ ಅಭಿಯಂತರ ಆನಂದ್ ವಿಜಯವಾಣಿಗೆ ತಿಳಿಸಿದ್ದಾರೆ. ಪ್ರತಿ ಮನೆಗೆ ಚೇಂಬರ್ ನಿರ್ಮಾಣ ಮಾಡಲಾಗಿದ್ದು, ಒಳಚರಂಡಿ ಮಂಡಳಿಯಿಂದ ಸೂಚಿಸಿದ ನಂತರ ನಿವಾಸಿಗಳು ಯುಜಿಡಿಗೆ ಸಂಪರ್ಕ ನೀಡಬಹುದಾಗಿದೆ.

ಕಾವೇರಿ ಮಲಿನ ನಿಯಂತ್ರಣ: ಯುಜಿಡಿ ಕಾಮಗಾರಿ ಪೂರ್ಣಗೊಂಡರೆ ಕಾವೇರಿ ನದಿಗೆ ಸೇರುತ್ತಿರುವ ಮಲಿನ ನೀರು ನಿಯಂತ್ರಣವಾಗಲಿದೆ. ಚರಂಡಿಗಳ ಮೂಲಕ ತ್ಯಾಜ್ಯ ನೀರು ನೇರವಾಗಿ ಕಾವೇರಿ ಒಡಲು ಸೇರುತ್ತಿದ್ದು, ಕಾವೇರಿ ಮಲೀನಗೊಳ್ಳಲು ಇದು ಕಾರಣವಾಗಿತ್ತು. 12 ವರ್ಷಗಳ ನಂತರ ಇಲ್ಲಿನ ಜನರ ಭರವಸೆಯ ಕಾಮಗಾರಿ ಚಾಲನೆಗೊಳ್ಳುತ್ತಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳಿಸದೆ ಜನರ ಕೆಂಗಣ್ಣಿಗೆ ಕಾರಣವಾಗಿದ್ದ ಯುಜಿಡಿ ಕೂಡ ಸದ್ಯ ಜನರ ಶಾಪದಿಂದ ವಿಮುಕ್ತಿ ಪಡೆಯುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net