ದಲಿತ ಬ್ರಾಹ್ಮಣನಾಗಲಿಕ್ಕೆ ಸಾಧ್ಯನಾ ?

Siddu_Web4
Published on

ತುಮಕೂರು: ಬಡವ ಶ್ರೀಮಂತನಾಗಬಹುದು. ಆದರೆ, ದಲಿತ ಬ್ರಾಹ್ಮಣನಾಗಲಿಕ್ಕೆ ಸಾಧ್ಯನಾ? ನಮ್ಮ ಜಾತಿ ವ್ಯವಸ್ಥೆ ನಿಂತ ನೀರಿದ್ದಂಗೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕುರುಬ ಸಾಂಸ್ಕೃತಿಕ ಪರಿಷತ್​ ವತಿಯಿಂದ ಆಯೋಜಿಸಿರುವ 2 ದಿನಗಳ ಕುರುಬ ಸಾಹಿತ್ಯ- ಸಾಂಸ್ಕೃತಿಕ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಜಾತಿಗೆ ಚಲನೆ ಇಲ್ಲ. ವರ್ಗಕ್ಕೆ ಚಲನೆ ಇದೆ. ನಾನು ಯಾವ ಜಾತಿಯಲ್ಲಿ ಹುಟ್ಟಿರುತ್ತೇನೋ ಸಾಯೋವರೆಗೆ ಅದೇ ಜಾತಿಯಲ್ಲಿರುತ್ತೇನೆ. ಆರ್ಥಿಕ ಚಟುವಟಿಕೆಗಳು ಪ್ರತಿ ಜಾತಿನಲ್ಲು ಬರಬೇಕು. ಈ ಚಲನೆ ಸಿಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶಕ್ತಿ ಬಂದಲ್ಲಿ ಜಾತ್ಯಾತಿತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಬಸವಣ್ಣ 850 ವರ್ಷಗಳ ಹಿಂದೆಯೇ ಅನುಭವ ಮಂಟಪ ರಚಿಸಿ ಸಮಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು. ಪ್ರಗತಿಪರ ವಿಚಾರಗಳನ್ನು ಇಟ್ಟುಕೊಂಡವರಿಗೆ ನಿರಂತರವಾಗಿ ಅಡ್ಡಿ ಆತಂಕಗಳು ಬರುತ್ತಲೇ ಇರುತ್ತವೇ. ಹಾಗಾಗಿ ಪ್ರಗತಿಪರ ವಿಚಾರಗಳ ಜತೆ ನೀವು ಸದಾ ಗಟ್ಟಿಯಾಗಿ ನಿಲ್ಲಲೇಕು. ಪ್ರಗತಿಪರ ವಿಚಾರಗಳ ಜತೆಗೆ ನಾವು ನಿಲ್ಲದೆ ಹೋದರೆ ಸಮಸಮಾಜ ನಿರ್ಮಾಣ ಕನಸು ಸಾಧ್ಯವಿಲ್ಲ ಎಂದು ತಿಳಿಸಿದರು.

ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ರಾಜಕೀಯ, ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವ ಸಿಕ್ಕಿಲ್ಲವೋ ಅಲ್ಲಿವರೆಗೆ ಸಮಾನತೆ ಸಿಕ್ಕಿಲ್ಲ. ಖರೀದಿಸುವ ಶಕ್ತಿ ಎಲ್ಲರಿಗೂ ಸಿಗಬೇಕು ಎಂಬ ಕಾರಣಕ್ಕೆ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದೆ. ಆದರೆ, ಕೆಲವು ಪಟ್ಟಭದ್ರಹಿತಾಸಕ್ತಿಗಳು ಇದನ್ನು ವಿರೋಧಿಸಿದವು. ಆರ್ಥಿಕ, ಸಾಮಾಜಿಕ ಶಕ್ತಿ ಬಂದರೆ ಸಮಾನತೆ ಮೂಡಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ರಾಜ್ಯ ಗ್ಯಾರಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಎಚ್​.ಎಂ.ರೇವಣ್ಣ, ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್​.ಹುಲಿನಾಯ್ಕರ್​, ಪತ್ರಿಕೋದ್ಯಮಿ ಎಸ್​.ನಾಗಣ್ಣ, ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ, ಶ್ರೀದೇವಿ ಶಿಕ್ಷಣ ಸಂಸ್ಥೆ ಟ್ರಸ್ಟಿ ಡಾ.ರಮಣ್​ ಹುಲಿನಾಯ್ಕರ್​, ಇನ್​ ಸೈಟ್​ ಸಂಸ್ಥೆಯ ಜಿ.ಬಿ.ವಿನಯಕುಮಾರ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net