

ವಿಜಯವಾಣಿ ಸುದ್ದಿಜಾಲ ಗುರುಪುರ
ಮನೆ, ನಿವೇಶನರಹಿತರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಕುಪ್ಪೆಪದವು ಮನೆ, ನಿವೇಶನರಹಿತರ ಹೋರಾಟ ಸಮಿತಿ ಕುಪ್ಪೆಪದವು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿತು.
ಸಾವಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ವಾತನಾಡಿ, 6 ವರ್ಷಗಳ ಹಿಂದೆ 98 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ್ದರೂ ಇದುವರೆಗೆ ನಿವೇಶನ ಗುರುತಿಸಿಲ್ಲ. ಈ ಭಾಗದ ಶಾಸಕರು ಮತ್ತು ಅಧಿಕಾರಿಗಳು ಏನು ವಾಡುತ್ತಿದ್ದಾರೆ? ಮೂಲಸೌಲಭ್ಯ ಒದಗಿಸಲು ಸಾಧ್ಯವಾಗದ ಅಧಿಕಾರಿಗಳು, ಶಾಸಕರು, ಸಚಿವರು, ಸರ್ಕಾರ ಯಾಕಿರಬೇಕು ಎಂದು ಪ್ರಶ್ನಿಸಿದರಲ್ಲದೇ ಹಕ್ಕುಪತ್ರ ಪಡೆದವರಿಗೆ ನಿಗದಿತ ಸಮಯದೊಳಗೆ ನಿವೇಶನ ನೀಡದೆ ಹೋದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಗುರುಪುರ ಹೋಬಳಿಯ ನಾಡಕಚೇರಿಯ ಉಪತಹಸೀಲ್ದಾರ್ ಸ್ಟೀಫನ್, ಕಂದಾಯ ನಿರೀಕ್ಷಕ ಪೂರ್ಣಚಂದ್ರ, ಪಂಚಾಯಿತಿ ಅಧ್ಯಕ್ಷೆ ವಿಮಲಾ ಜಿ., ಉಪಾಧ್ಯಕ್ಷ ಮುಹಮ್ಮದ್ ಶರೀಫ್ ಕಜೆ, ಪಿಡಿಒ ಸವಿತಾ ಮಂದೋಲಿಕರ್, ಗ್ರಾಮಕರಣಿಕ ಮುತ್ತಪ್ಪ ಸ್ಥಳಕ್ಕಾಗಮಿಸಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು.
ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಉಪತಹಸೀಲ್ದಾರ್ ಸ್ಟೀಫನ್ ಭರವಸೆ ನೀಡಿದರು.
ಕುಪ್ಪೆಪದವು ಪಂಚಾಯಿತಿ ಉಪಾಧ್ಯಕ್ಷ ಮುಹಮ್ಮದ್ ಶರೀಫ್ ವಾತನಾಡಿ, ಕಲ್ಲಾಡಿ ಎಂಬಲ್ಲಿ ನಿವೇಶನಕ್ಕಾಗಿ ಗುರುತಿಸಲಾದ ಜಾಗಕ್ಕೆ ಅರಣ್ಯ ಇಲಾಖೆಯಿಂದ ನಿರಪೇಕ್ಷಣಾ ಪತ್ರ ನೀಡಿದ್ದು, ಹಕ್ಕುಪತ್ರ ಪಡೆದಿರುವ 17 ಕುಟುಂಬಗಳಿಗೆ ಮುಂದಿನ ಒಂದು ತಿಂಗಳೊಳಗೆ ಕಲ್ಲಾಡಿಯಲ್ಲಿ ನಿವೇಶನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ಸದಾಶಿವ ದಾಸ್, ವಸಂತಿ ಕುಪ್ಪೆಪದವು ವಾತನಾಡಿದರು. ನಿವೇಶನಕ್ಕಾಗಿ ಅರ್ಜಿ ಸಲ್ಲಿದವರು, ಹಕ್ಕುಪತ್ರ ಪಡೆದವರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.