

ಗುರುಪುರ: ಕುಪ್ಪೆಪದವು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಸಿಬ್ಬಂದಿ ನಿಯೋಗ ಮಂಗಳವಾರ ಮಂಗಳೂರಿನ ಶಾಸಕರ ಕಚೇರಿಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಅವರನ್ನು ಭೇಟಿಯಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಹಕ್ಕುಪತ್ರ ಪಡೆದುಕೊಂಡ ಅರ್ಹ ಫಲಾನುಭವಿಗಳಿಗೆ ಇನ್ನೂ ನಿವೇಶನ ಸಿಗದೆ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಚರ್ಚಿಸಿತು.
ನಿವೇಶನರಹಿತರು ಕಳೆದ 11 ದಿನಗಳಿಂದ ಕುಪ್ಪೆಪದವು ಗ್ರಾಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಹೂಡಿದ್ದು, ಸೋಮವಾರ ಮಂಗಳೂರು ತಹಸೀಲ್ದಾರ್ ಪ್ರಶಾಂತ್ ಪಾಟೀಲ್ ನೀಡಿದ ಸ್ಪಷ್ಟ ಭರವಸೆ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಗಿತ್ತು. ಆಗಸ್ಟ್ 15ರಂದು ಭರವಸೆ ಪೂರೈಕೆಯಾಗದೆ ಹೋದಲ್ಲಿ ಮತ್ತೆ ಧರಣಿ ಆರಂಭವಾಗಲಿದೆ ಎಂದು ನಿವೇಶನರಹಿತರು ತಿಳಿಸಿದ್ದರು.
ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ತಾಂತ್ರಿಕ ಸಮಸ್ಯೆಯಿಂದ ನಿವೇಶನ ಹಂಚಿಕೆ ವಿಳಂಬವಾಗಿದೆ ಎಂಬ ವಿಷಯ ಗಮನಕ್ಕೆ ಬಂದಿದೆ. ಗ್ರಾಪಂ ಮುಂದಿನ ಕಾರ್ಯ ಯೋಜನೆಗಳಿಗೆ ಬೆಂಬಲ ನೀಡುವುದರೊಂದಿಗೆ ಸೂಕ್ತ ಅನುದಾನ ಒದಗಿಸಲು ಪ್ರಯತ್ನಿಸುವೆ. ಪಂಚಾಯಿತಿ ಗೊತ್ತುಪಡಿಸಿದ ಮನೆ ನಿವೇಶನ ಜಾಗ ಖುದ್ದು ಪರಿಶೀಲಿಸಿ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸುವೆ ಎಂದರು.
ಕುಪ್ಪೆಪದವು ಗ್ರಾಪಂ ಅಧ್ಯಕ್ಷೆ ವಿಮಲಾ ಜಿ., ಉಪಾಧ್ಯಕ್ಷ ಮುಹಮ್ಮದ್ ಶರೀಫ್ ಕಜೆ, ಸದಸ್ಯರಾದ ನಿತೇಶ್ ದೊಡ್ಡಳಿಕೆ, ರಫೀಕ್ ಆಚಾರಿಜೋರ, ವಿಜಯಾ ಕಲ್ಲಾಡಿ, ಪಿಡಿಒ ಸವಿತಾ ಮಂದೋಳಿಕರ್, ಲೆಕ್ಕ ಸಹಾಯಕ ಇಸ್ಮಾಯಿಲ್ ಎಂ.ಎಸ್. ಮತ್ತಿತರರು ಇದ್ದರು.