

ತುಮಕೂರು: ಡಿಸಿಎಂ ಡಿಕೆಶಿ ಸಹೋದರ ಸಂಬಂಧಿ, ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಅಚ್ಚರಿ ಬೆಳವಣಿಗೆಯಲ್ಲಿ ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ ಅವರನ್ನು ಭೇಟಿ ಮಾಡಿರುವುದು ತೀವ್ರ ಚರ್ಚೆ ಹುಟ್ಟುಹಾಕಿದೆ.
ಲಿಂಕ್ ಕೆನಾಲ್ ಯೋಜನೆ ವಿರುದ್ಧದ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಶ್ರೀ ಕಾರದ ವೀರಬಸವ ಸ್ವಾಮೀಜಿ ಅವರನ್ನು ಸೋಮವಾರ ಸಂಜೆ ರಂಗನಾಥ್ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಉಂಟುಮಾಡಿದೆ. ಲಿಂಕ್ ಕೆನಾಲ್ ಹೋರಾಟದಿಂದ ಕುಣಿಗಲ್ಗೆ ಅನ್ಯಾಯವಾಗುತ್ತಿರುವ ಬಗ್ಗೆ ಶ್ರೀಗಳ ಜತೆ ಚರ್ಚೆ ನಡೆಸಿ ತಮ್ಮ ಅಳಲು ತೋಡಿಕೊಂಡರು.
ರಂಗನಾಥ್ ಅವರ ಶ್ರೀಗಳ ಭೇಟಿ ಹಿಂದೆ ಒತ್ತಡ ತಂತ್ರವೋ, ಹೋರಾಟ ದಾರಿತಪ್ಪಿಸುವ ಉದ್ದೇಶ ಅಡಗಿದೆಯೋ ಎಂಬುದು ಹೋರಾಟಗಾರರ ಕಳವಳಕ್ಕೆ ಕಾರಣವಾಗಿದೆ.
ಮೇ 31 ರಂದು ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ವಿರೋಧಿ ಹೋರಾಟವು ನಿರೀಕ್ಷೆ ಗು ಮೀರಿ ಯಶಕಂಡಿದ್ದು ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಹಾಗಾಗಿ, ಡಿ.ಕೆ.ಶಿವಕುಮಾರ್ ಮಠಾಧೀಶರ ಮನವೊಲಿಕೆಗೆ ಮುಂದಾಗಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ.