

ತುಮಕೂರು: ಕಳೆದೊಂದು ತಿಂಗಳಿನಿಂದ ಬಂದ್ ಆಗಿದ್ದು ಕುಣಿಗಲ್ ರೈಲ್ವೆ ಕೆಳಸೇತುವೆ ದುರಸ್ತಿ ಕಾರ್ಯ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಮೇ 24ರಿಂದ ಈ ರಸ್ತೆಯಲ್ಲಿ ವಾಹನ ನಿರ್ಬಂಧ ಹೇರಲಾಗಿದ್ದು ಗುರುವಾರದಿಂದ ವಾಹನ ಸಂಚಾರ ಪುನರಾರಂಭಗೊಂಡಿವೆ.
ಮಳೆಗಾಲ ಬಂತೆಂದರೆ ಹಾಳಾಗುತ್ತಿದ್ದ ಕುಣಿಗಲ್ ರೈಲ್ವೆ ಅಂಡರ್ ಪಾಸ್ ರಸ್ತೆ ದುರಸ್ತಿಯನ್ನು ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಚಾಲನೆ ನೀಡಿದ್ದಲ್ಲದೆ 1 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಖಡಕ್ ಸೂಚನೆ ಕೊಟ್ಟಿದ್ದರು. ಅದರಂತೆ 40 ದಿನದೊಳಗೆ ಅಂಡರ್ಪಾಸ್ ರಿಪೇರಿ ಕಾಮಗಾರಿ ಪೂರ್ಣಗೊಳಿಸಲಾಯಿತು. ಸುಮಾರು ವರ್ಷಗಳಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು ಪ್ರತಿನಿತ್ಯ ಸಂಚರಿಸಲು ಪರದಾಡುತ್ತಿದ್ದರು. ಅದರಲ್ಲು ಮಳೆ ಬಂದಾಗಲಂತೂ ತುಂಬಾ ಕಿರಿಕಿರಿ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಅಂಡರ್ಪಾಸ್ ರಸ್ತೆ, ಚರಂಡಿ ವ್ಯವಸ್ಥೆ, ಫುಟ್ಪಾತ್ ಹಾಗೂ ರೈಲಿಂಗ್ಸ್ ನವೀಕರಣ ಕಾಮಗಾರಿಯನ್ನು ಕೈಗೊತ್ತಿಕೊಳ್ಳಲಾಗಿತ್ತು.