

Kunigal News : ಪಟ್ಟಣದಲ್ಲಿ ಮೊನ್ನೆ (ಏ.4) ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಶಾಸಕರ ಎದುರೇ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು, ಸಾರ್ವಜನಿಕರಿಂದ ಭಾರೀ ಟೀಕೆ ಗುರಿಯಾಗಿದೆ. ಅಷ್ಟೇ ಅಲ್ಲ, ಇದು ತಪ್ಪು ಎಂದು ಆರಂಭದಲ್ಲಿ ಹೇಳುವ ಶಾಸಕರು ಇಡೀ ಕಾರ್ಯಕ್ರಮದುದ್ದಕ್ಕೂ ಆ ತಪ್ಪು ನಡೆಯುತ್ತಿದ್ದರೂ ಸುಮ್ಮನಿರುವುದು ಚರ್ಚೆಗೆ ಗ್ರಾಸವಾಗಿದೆ.
ಏನಿದು ಪ್ರಕರಣ?: ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕುಣಿಗಲ್ ಪಟ್ಟಣದಲ್ಲಿ ಶುಕ್ರವಾರ "ನಮ್ಮ ಕ್ಲಿನಿಕ್" ನಗರ ಆಯುಷ್ಮಾನ್ ಆರೋಗ್ಯ ಮಂದಿರ ಉದ್ಘಾಟನೆ ಕಾರ್ಯಕ್ರಮವಿತ್ತು. ಶಾಸಕ ಡಾ. ರಂಗನಾಥ್ ಅವರು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಮಂಜುಳಾ ನಾಗರಾಜ್ ಗೈರಾಗಿದ್ದು, ಅವರ ಜಾಗದಲ್ಲಿ ಪತಿ, ಕಾಂಗ್ರೆಸ್ ಮುಖಂಡ ನಾಗರಾಜು(ಮಲ್ಯ ನಾಗರಾಜು) ಹಾಜರಿದ್ದರು. ಇದನ್ನ ಗಮನಿಸಿದ ಶಾಸಕರು, 'ಎಲ್ರೀ ಪುರಸಭೆ ಅಧ್ಯಕ್ಷರು? ಅವರಿಲ್ಲದೆ ನೀವು ಬರಂಗಿಲ್ಲ ಇಲ್ಲಿಗೆ, ಎಲ್ಲ ಕಾರ್ಯಕ್ರಮಕ್ಕೂ ಅಧ್ಯಕ್ಷರೇ ಬರ್ಬೇಕು, ನೀವಲ್ಲ ಬರೋದು, ಕರೆಸ್ರೀ ಅಧ್ಯಕ್ಷರನ್ನ...' ಅನ್ನುತ್ತಿದ್ದಂಗೆ 'ಆಯ್ತು ಆಯ್ತು...' ಅನ್ನುತ್ತಾ ಶಾಸಕರ ಪಕ್ಕದಲ್ಲೇ ನಿಂತು ಕೊಸರಾಡುವ ಮಲ್ಯ ನಾಗರಾಜುಗೆ 'ಇದೆಲ್ಲಾ ಸರಿ ಬರಲ್ಲಾ ರೀ, ಇದು ನಿಯಮನೂ ಅಲ್ಲ. ಅಧ್ಯಕ್ಷರೇ ಹಾಜರಾಗ್ಬೇಕು' ಎಂದು ವಾರ್ನಿಂಗ್ ಮಾಡುತ್ತಲೇ ಶಾಸಕರು ಟೇಪ್ ಕತ್ತರಿಸಿ ಉದ್ಘಾಟನೆಯನ್ನೂ ಮಾಡ್ತಾರೆ. ಈ ವಿಡಿಯೋ ವೈರಲ್ ಆಗಿದೆ. ಟೇಪ್ ಕತ್ತರಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾದ್ರೂ ಶಾಸಕರು ಮೌನವಾಗಿಯೇ ಇದ್ದದ್ದು ಭಾರೀ ಟೀಕೆಗೆ ಗುರಿಯಾಗಿದೆ.
ವೇದಿಕೆ ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಗಣೇಶ್ ಬಾಬು ಅವರು ವೇದಿಕೆಯ ಎರಡನೇ ಸಾಲಿನಲ್ಲಿ ಕುಳಿತರೆ, ಚುನಾಯಿತರಲ್ಲದ ಕೆಲ ಕಾಂಗ್ರೆಸ್ ಮುಖಂಡರು ಅಂದರೆ ಪುರಸಭೆ ಅಧ್ಯಕ್ಷೆಯ ಪತಿ ಮಲ್ಯ ನಾಗರಾಜು, ಆಡಿಟ್ ನಾಗರಾಜು, ನಾರಾಯಣ್ ಎಂಬುವವರು ಶಾಸಕರ ಪಕ್ಕದಲ್ಲೇ ಕುಳಿತಿದ್ದಾರೆ. ಈ ಕಾರ್ಯಕ್ರಮದ ಫೋಟೋಗಳನ್ನು ಶಾಸಕರೂ ತಮ್ಮ ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದಾರೆ.
ಸರ್ಕಾರಿ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷೆ ಗೈರಾಗಿದ್ದು, ಅವರ ಪತಿಯೇ ದರ್ಬಾರ್ ಶುರು ಮಾಡಿದ್ದಾರೆ. ತಾಲೂಕು ವೈದ್ಯಾಧಿಕಾರಿಗೆ ಮೊದಲ ಸಾಲಿನಲ್ಲಿ ಕೂರುವ ಅವಕಾಶವಿಲ್ಲ. ಶಾಸಕರ ಹಿಂಬಾಲಕರಿಗೆ ಆ ಯೋಗ ಇದೆ. ಇದು ಸರ್ಕಾರಿ ಕಾರ್ಯಕ್ರಮ ಎಂಬುದ ಮರೆತು ಕಾಂಗ್ರೆಸ್ ಸಭೆ ಎಂಬಂತೆ ದುರಾಡಳಿತ ನಡೆಸುತ್ತಿದೆ ಎಂದು ಹಲವರು ಕಾಮೆಂಟ್ಸ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಕುಣಿಗಲ್ ಪುರಸಭೆಗೆ 2ನೇ ವಾರ್ಡ್ನಿಂದ ಚುನಾಯಿತರಾಗಿರುವ ಮಂಜುಳಾ ನಾಗರಾಜು ಅವರು ಇತ್ತೀಚೆಗಷ್ಟೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಪುರಸಭೆ ಅಧಿಕಾರಿ ಕೂಡ ಮಹಿಳೆ. ಅಧ್ಯಕ್ಷೆ ಕೂಡ ಮಹಿಳೆ. ಇಬ್ಬರ ಉಪಸ್ಥಿತಿಯಲ್ಲಿ ಪಟ್ಟಣದ ಸ್ವಚ್ಛ ಚಂದ ಆಗಲಿದೆ ಎಂಬ ನಿರೀಕ್ಷೆ ಹುಸಿಯಾಗದಿರಲಿ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತು ಜವಾಬ್ದಾರಿ ನಿರ್ವಹಿಸಲಿ ಎಂದು ಕೆಲವರು ಆಗ್ರಹಿಸಿದ್ದಾರೆ.