ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸಲು ಆದ್ಯತೆ

SUB02538
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸುವುದಕ್ಕೆ ಆದ್ಯತೆ ನೀಡಿ ಬಳಿಕ ಆ ಪ್ರದೇಶಕ್ಕೆ ವಿಮಾನ ನಿಲ್ದಾಣ ನಿಮಾರ್ಣ ಕುರಿತು ಚಿಂತನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಭರವಸೆ ನೀಡಿದರು.

ಬೆಂಗಳೂರಿನ 'ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ನಗರದ ಹೊಸಕೆರೆಹಳ್ಳಿಯ ನಂದಿ ಲಿಂಕ್​ ಗ್ರೌಂಡ್ಸ್​ನಲ್ಲಿ ಹಮ್ಮಿಕೊಂಡ ಎರಡು ದಿನಗಳ "ಕುಂದಾಪ್ರ ಕನ್ನಡ ಹಬ್ಬ-2025'ರ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

340 ಕಿ.ಮೀ.ಉದ್ದದ ಕರಾವಳಿಗೆ ಪ್ರತ್ಯೇಕ ಪ್ರವಾಸ ನೀತಿ ರೂಪಿಸುವ ಚಿಂತನೆ ಸರ್ಕಾರಕ್ಕೆ ಇದೆ. ಈ ನೀತಿ ಜಾರಿಯಾದ ಬಳಿಕ ವಿಮಾನ ನಿಲ್ದಾಣದ ಬಗ್ಗೆ ಚಿಂತಿಸೋಣ. ಕುಂದಾಪುರ ಜನರ ಕಲೆ, ಸಾಹಿತ್ಯ, ಸಂಸತಿ ಮುಖ್ಯವಾಗಿ ಒಗ್ಗಟ್ಟು ನೋಡಿ ತುಂಬಾ ಖುಷಿಯಾಯಿತು. ನೀವು ಇಷ್ಟೊಂದು ಜನರನ್ನು ಒಟ್ಟು ಸೇರಿಸಿ, ಕರ್ನಾಟಕದ ಹೃದಯ ಭಾಗದಲ್ಲಿ ಇದ್ದೀವಿ ಅಂತ ತೋರಿಸಿದ್ದೀರಿ. ಬಿಬಿಎಂಪಿ ಐದು ಭಾಗ ಮಾಡಿದಾಗ ಕೆಲವರು ಆಕ್ಷೇಪಿಸಿದ್ದರು. ಆದರೆ ಇದು ಕರ್ನಾಟಕದ ಹೃದಯ ಭಾಗ. ದಕ್ಷಿಣಕನ್ನಡ, ಉಡುಪಿ ಸೇರಿ ಎಲ್ಲ ಭಾಗದ ಜನರ ಕೇಂದ್ರ ಸ್ಥಳವಿದು. ಇಲ್ಲಿ ಹೊರಗಡೆಯವರು ಅನ್ನೋ ಭಯ ಯಾರಿಗೂ ಬೇಡ ಎಂದರು.

ಎಂಆರ್​ಜಿ ಗ್ರೂಪ್​ ಸಿಎಂಡಿ ಪ್ರಕಾಶ್​ ಶೆಟ್ಟಿ ಮಾತನಾಡಿ, ನಾನು ಉಡುಪಿಯವನಾದರೂ ಕುಂದಾಪುರದ ಜತೆ ನನ್ನದು ಹತ್ತಿರದ ಸಂಬಂಧವಿದೆ. ನಾನು ಸೆಕೆಂಡ್​ ಪಿಯುಸಿ ಓದುವಾಗಲೇ ಕುಂದಾಪುರದಲ್ಲಿ ಟಿಂಬರ್​ ಬಿಸಿನೆಸ್​ ಮಾಡ್ತಿದ್ದೆ, ಹಾಗೆ ನನ್ನ ಉದ್ಯಮ ಬದುಕು ಶುರುವಾಗಿದ್ದೇ ಕುಂದಾಪುರದಿಂದ, ನಂತರ ಬೆಂಗಳೂರಿಗೆ ಬಂದಾಗ ನನಗೆ ಮೊದಲು ಸಹಾಯ ಮಾಡಿದವರು ಕುಂದಾಪುರದ ವಿ.ಪಿ.ಶೆಟ್ಟರು. ಅವರು ಮೂರು ಬ್ಯಾಂಕಿನ ಚೇರ್ಮನ್​ ಆಗಿದ್ದ ದೇಶದ ಏಕೈಕ ವ್ಯಕ್ತಿ ಎಂದು ಹೇಳಿದರು. ಸಿನಿಮಾ ನಿರ್ದೇಶಕ ಯೋಗರಾಜ್​ ಭಟ್​ ಅವರಿಗೆ ಡಿಸಿಎಂ ಸಮ್ಮುಖದಲ್ಲಿ "ಊರ ಗೌರವ' ಎನ್ನುವ ವಿಶೇಷ ಪುರಸ್ಕಾರ ನೀಡಲಾಯಿತು.

ನಟಿ ರಕ್ಷಿತಾ ಪ್ರೇಮ್​, ಪತ್ರಕರ್ತ ಜೋಗಿ, ಯುನಿವರ್ಸಲ್​ ಗ್ರೂಪ್​ ಆಫ್​ ಇನ್​ಸ್ಟಿಟ್ಯೂಟ್​ನ ಉಪೇಂದ್ರ ಶೆಟ್ಟಿ, ಚಿತ್ರ ನಟರಾದ ಶೈನ್​ ಶೆಟ್ಟಿ, ಪ್ರವಿರ್​ ಶೆಟ್ಟಿ, ಲೈಫ್​ಲೈನ್​ ಟೆಂಡರ್​ ಚಿಕನ್​ ಮ್ಯಾನೇಜಿಂಗ್​ ಡೈರೆಕ್ಟರ್​ ಕಿಶೋರ್​ ಹೆಗ್ಡೆ, ವಿಎಲ್​ ಗ್ರೂಪ್​ ಮ್ಯಾನೇಜಿಂಗ್​ ಡೈರೆಕ್ಟರ್​ ಅಂಜಲಿ ವಿಜಯ್​, ಎಎಸ್​ ಗ್ರೂಪ್ಸ್​ ಮ್ಯಾನೇಜಿಂಗ್​ ಡೈರೆಕ್ಟರ್​ ಸತೀಶ್​ ಶೆಟ್ಟಿ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್​ ಶೆಟ್ಟಿ ಬಾರ್ಕೂರು, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್​, ಜೊತೆ ಕಾರ್ಯದರ್ಶಿ ಅಜಿತ್​ ಶೆಟ್ಟಿ ಉಳ್ತೂರು, ಕೋಶಾಧಿಕಾರಿ ವಿಜಯ್​ ಶೆಟ್ಟಿ ಹಾಲಾಡಿ ಮುಂತಾದವರು ಉಪಸ್ಥಿತರಿದ್ದರು.

ಊರು ಅಂದ್ರೆ ವ್ಯಕ್ತಿಗಿಂತ ದೊಡ್ದದು. ಜನ್ಮ ಕೊಟ್ಟ ಊರು ಎಲ್ಲರಿಗಿಂತ ದೊಡ್ಡದು. ಊರು-ಭಾಷೆ ಹೆಸರೇ ನನ್ನನ್ನು ಇಲ್ಲಿ ತಂದು ನಿಲ್ಲಿಸಿದೆ. ಕುಂದಾಪುರದ ತಂತ್ರಾಡಿ ನಾನು ಹುಟ್ಟಿದ ಊರು. ಬೆಳೆದದ್ದು ಧಾರವಾಡ ಜಿಲ್ಲೆಯಾದ್ರೂ ಮನೆಯಲ್ಲಿ ಕುಂದಾಪ್ರದ ವಾತಾವರಣ ಇತ್ತು. ಭಾಷೆ ಬದುಕಾಗಿ ಅನ್ನ ಹುಟ್ಟಿಸುವ ಮಟ್ಟಕ್ಕೆ ತಂದಿದೆ. ನಮ್ಮ ಭಾಷೆಯನ್ನು ಎಷ್ಟಾಗುತ್ತೋ ಅಷ್ಟು ಮತ್ತೆ ಮತ್ತೆ ಮಾತಾಡಿ. > ಯೋಗರಾಜ್​ ಭಟ್​, ಸಿನಿಮಾ ನಿರ್ದೇಶಕ (ಊರ ಗೌರವ ಪುರಸತರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net