ಕುಂದಾನಗರಿಯಲ್ಲಿ ಹೊಂದಾಣಿಕೆಯೇ ಕಗ್ಗಂಟು!

Belagavi
Published on

ರಾಜ್ಯ ರಾಜಕಾರಣದ ಪವರ್​ಹೌಸ್ ಬೆಳಗಾವಿ ಜಿಲ್ಲೆಯ ರಾಜಕಾರಣವೇ ವಿಚಿತ್ರ, ವಿಭಿನ್ನ ಹಾಗೂ ಕಗ್ಗಂಟು. ಸಹಕಾರ ರಂಗದ ಬಿಗಿ ಹಿಡಿತ ಇರುವ ಜಿಲ್ಲೆಯಲ್ಲಿ ‘ಸಕ್ಕರೆ’ ರಾಜಕಾರಣ, ಭಾಷೆ, ಗಡಿ, ಕುಟುಂಬ ರಾಜಕಾರಣವೂ ಸೇರಿ ‘ಒಳ ಹೊಂದಾಣಿಕೆ’ಯೂ ನಿರ್ಣಾಯಕ ಪಾತ್ರ ವಹಿಸುತ್ತ ಬಂದಿರುವುದು ಸುಳ್ಳಲ್ಲ. 2023ರ ವಿಧಾನಸಭಾ ಚುನಾವಣೆಗೆ ಅಖಾಡ ಈಗಾಲೇ ಸಿದ್ಧವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿವೆ. ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 10 ಕ್ಷೇತ್ರಗಳಿವೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕೆಡವಿದಾಗಿನಿಂದ ಇಲ್ಲಿನ ರಾಜಕೀಯ ಸ್ಥಿತಿ ‘ಮನೆಯೊಂದು ಮೂರು ಬಾಗಿಲು’ ಎಂಬಂತಾಗಿದ್ದು, ಯಾರ್ಯಾರು ಹೊಂದಾಣಿಕೆ ಮಾಡಿಕೊಳ್ಳುತ್ತಾರೋ? ಯಾರ್ಯಾರು ಹೊಂದಾಣಿಕೆ ಹೆಸರಲ್ಲೇ ಮತ್ತೊಬ್ಬರ ಕಾಲು ಜಗ್ಗುತ್ತಾರೋ ಎಂಬುದು ಸದ್ಯಕ್ಕೆ ಗುಟ್ಟು. 10 ಕ್ಷೇತ್ರಗಳ ಪೈಕಿ ಬೈಲಹೊಂಗಲ ಹಾಗೂ ಅರಬಾವಿ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಉಸಿರಾಡುತ್ತಿದ್ದು, ಉಳಿದೆಡೆ ಬಿಜೆಪಿ-ಕಾಂಗ್ರೆಸ್ ನೇರ ಹಣಾಹಣಿ ಏರ್ಪಡಲಿದೆ.

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿಗೆ ಅಭಯ

ಹಲವು ದಶಕಗಳಿಂದ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಗಿಂತ ಭಾಷಾ ರಾಜಕಾರಣವೇ ಪ್ರತಿ ಚುನಾವಣೆಯಲ್ಲಿ ಮೇಲುಗೈ ಸಾಧಿಸಿಕೊಂಡು ಬರುತ್ತಿದೆ. ಇಲ್ಲಿ ನೇಕಾರ ಹಾಗೂ ಮರಾಠ ಮತದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. 2008ರಲ್ಲಿ ರಚನೆಯಾದ ಕ್ಷೇತ್ರದಲ್ಲಿ ಮೊದಲ ಬಾರಿ ಬಿಜೆಪಿ, ಎರಡನೇ ಬಾರಿ ಎಂಇಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಅಭಯ ಪಾಟೀಲ ಆಯ್ಕೆಗೊಂಡು ಹಿಂದುತ್ವ, ಅಭಿವೃದ್ಧಿ ಅಸ್ತ್ರದ ಮೂಲಕ ಎಂಇಎಸ್ ನಾಯಕರಿಂದ ಮರಾಠಿ ಭಾಷಿಕರನ್ನು ತಮ್ಮತ್ತ ಸೆಳೆದುಕೊಂಡರು. ಇಲ್ಲಿ ಕಾಂಗ್ರೆಸ್ ಮತದಾರರರೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ 1 ಲಕ್ಷಕ್ಕೂ ಅಧಿಕ ಮತ ಪಡೆದಿದ್ದ ಎಂಎಎಸ್ ಯುವ ಮುಖಂಡ ಶುಭಂ ಸೆಳಕೆ ಸ್ಪರ್ಧಿಸಿದರೆ ಅಭಯ ಅವರು ಗೆಲುವಿಗಾಗಿ ಇನ್ನೂ ಶ್ರಮಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.

ಉತ್ತರದಲ್ಲಿ ಬೆನಕೆಗೆ ಸೇಠ್ ಪೈಪೋಟಿ

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡಿಗರು, ಮರಾಠಿಗರು ಹಾಗೂ ಅಲ್ಪಸಂಖ್ಯಾತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್​ನಿಂದ ಫಿರೋಜ್ ಸೇಠ್ ಸತತ ಎರಡು ಬಾರಿ ಆಯ್ಕೆಗೊಂಡಿದ್ದರು. ಆದರೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನ ಒಳಜಗಳ, ಎಂಇಎಸ್ ನಾಯಕರ ಕಿತ್ತಾಟದಿಂದ ಹಿಂದುತ್ವ ಅಲೆಯ ಬೆನ್ನೇರಿ ಬಿಜೆಪಿಯ ಅನಿಲ ಬೆನಕೆ ಸರಳವಾಗಿ ಗೆಲುವು ಸಾಧಿಸಿದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್- ಬಿಜೆಪಿ ನೇರಾನೇರ ಸ್ಪರ್ಧೆ ಏರ್ಪಡಲಿದೆ. ಎಂಇಎಸ್ ನಾಯಕರ ನಿರ್ಧಾರಗಳೂ ವಿರೋಧಿಗಳ ಸೋಲು-ಗೆಲುವಿನ ಹಣೆಬರಹ ಬರೆಯುವುದನ್ನೂ ತಳ್ಳಿಹಾಕುವಂತಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಹೆಚ್ಚು ಆಕಾಂಕ್ಷಿತರಿದ್ದಾರೆ.

ಹೈವೋಲ್ಟೇಜ್​ನಲ್ಲಿ ಲಕ್ಷ್ಮೀ ಆಟ

ರಾಜ್ಯದ ಜಿದ್ದಾಜಿದ್ದಿನ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಬೇಕಾದರೆ ಮರಾಠಿಗರ ಮತಗಳೇ ನಿರ್ಣಾಯಕ. 2018ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. ಆ ವೇಳೆ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಪಕ್ಷಕ್ಕಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ. ಅಲ್ಲದೆ, ಕ್ಷೇತ್ರದ ಅಹಿಂದ ವರ್ಗ, ಮರಾಠಿಗರ ಮೇಲೆ ಜಾರಕಿಹೊಳಿ ಸಹೋದರರು ಪ್ರಬಲ ಹಿಡಿತ ಸಾಧಿಸಿದ್ದಾರೆ. ಏತನ್ಮಧ್ಯೆ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯದ ಶೀತಲ ಸಮರ ತಣ್ಣಗಾಗಿಲ್ಲವಾದ್ದರಿಂದ ಹೈವೋಲ್ಟೇಜ್ ಚುನಾವಣೆಗೆ ಗ್ರಾಮೀಣ ಕ್ಷೇತ್ರ ಸಾಕ್ಷಿಯಾಗಲಿದೆ.

ಖಾನಾಪುರದಲ್ಲಿ ಬೇಕು ಮರಾಠಿಗರ ಕೃಪಾಕಟಾಕ್ಷ

ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿ ಹಂಚಿಕೊಂಡಿರುವ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಮರಾಠಾ ಭಾಷಿಕರಿದ್ದಾರೆ. ಇಲ್ಲಿ ರಾಜಕೀಯ, ಅಭಿವೃದ್ಧಿ ವಿಚಾರಗಳಿಗಿಂತ ಹಿಂದುತ್ವ, ಗಡಿ, ಭಾಷೆಯ ಮೇಲೆ ಚುನಾವಣೆ ನಡೆದುಕೊಂಡು ಬರುತ್ತಿವೆ. 2018ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಂಇಎಸ್ ನಾಯಕರ ನಡುವಿನ ಕಿತ್ತಾಟದಿಂದಾಗಿ ಮತಗಳು ವಿಭಜನೆಯಾಗಿ ಕಾಂಗ್ರೆಸ್​ನ ಡಾ. ಅಂಜಲಿ ನಿಂಬಾಳ್ಕರ್ ಗೆಲುವು ಸಾಧಿಸಿದ್ದರು. ಆದರೆ, ಇದೀಗ ಎಂಇಎಸ್​ನ ಅರವಿಂದ ಪಾಟೀಲ ಬಿಜೆಪಿ ಸೇರ್ಪಡೆಯಾಗಿದ್ದರಿಂದ 2023ರ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಸ್ಪರ್ಧೆ ಏರ್ಪಡಲಿದೆ. ಎಂಇಎಸ್​ನಿಂದ ಪ್ರಬಲ ಅಭ್ಯರ್ಥಿ ಸ್ಪರ್ಧಿಸಿದರೆ ಬಿಜೆಪಿ ಗೆಲುವು ಕೂಡ ಅಷ್ಟು ಸುಲಭವಿಲ್ಲ.

ಬೈಲಹೊಂಗಲದಲ್ಲಿ ಬಂಡಾಯ ಬೇನೆ

ಕಿತ್ತೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದ ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಹೆಚ್ಚಿನ ಸಂಖ್ಯೆಯ ಲಿಂಗಾಯತ ಮತದಾರರನ್ನು ಹೊಂದಿದೆ. 2014ರ ಲೋಕಸಭೆ ಚುನಾವಣೆ ನಂತರ ಬಿಜೆಪಿಯಲ್ಲಿ ಕೆಜೆಪಿ ವಿಲೀನವಾದ ಬಳಿಕ ಅಂದಿನ ಶಾಸಕ ಡಾ.ವಿ.ಐ.ಪಾಟೀಲ ಬಿಜೆಪಿ ಸೇರ್ಪಡೆಯಾದರು. ಇದರ ಪರಿಣಾಮ ಮೂಲ ಬಿಜೆಪಿಗ ಜಗದೀಶ ಮೆಟ್ಟಗುಡ್ಡ 2018ರ ಚುನಾವಣೆಯಲ್ಲಿ ಪಕ್ಷೇತರರಾಗಿ ಹಾಗೂ ಬಿಜೆಪಿಯಿಂದ ಪಾಟೀಲ ಸ್ಪರ್ಧಿಸಿದರು. ಇವರಿಬ್ಬರ ತಿಕ್ಕಾಟದಿಂದ ಕಾಂಗ್ರೆಸ್​ನ ಮಹಾಂತೇಶ ಕೌಜಲಗಿ ಗೆಲುವು ಸಾಧಿಸಿದರು. ಈ ಬಾರಿ ಮೆಟಗುಡ್ಡ ಹಾಗೂ ಪಾಟೀಲ ಪೈಕಿ ಒಬ್ಬರಿಗೆ ಟಿಕೆಟ್ ಕೊಟ್ಟು ಒಬ್ಬರನ್ನು ಹಿಂದೆ ಸರಿಸಿದರೆ ಕಾಂಗ್ರೆಸ್ ಗೆಲುವಿನ ಓಟ ಕಷ್ಟವಾಗಲಿದೆ. ಜೆಡಿಎಸ್​ನ ಶಂಕರ ಮಾಡಲಗಿ ಕೂಡ ತಕ್ಕಮಟ್ಟಿಗೆ ಸ್ಪರ್ಧೆಯೊಡ್ಡಬಲ್ಲರು.

ಕಿತ್ತೂರಿನಲ್ಲಿ ಕಣ ರೋಚಕ

ಚನ್ನಮ್ಮನ ಕಿತ್ತೂರು ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆ. ಈ ಕ್ಷೇತ್ರದಿಂದ ಕಾಂಗ್ರೆಸ್​ನ ಡಾ.ಡಿ.ಬಿ.ಇನಾಮದಾರ್ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಇನಾಂದಾರ್ ಕುಟುಂಬದ ಒಳ ಜಗಳದಿಂದಾಗಿ ಬಾಬಾಸಾಹೇಬ ದೇವನಗೌಡ ಪಾಟೀಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದರಿಂದ ಕಾಂಗ್ರೆಸ್ ಮತಗಳು ವಿಭಜನೆಯಾಗಿ ಬಿಜೆಪಿಯ ಮಹಾಂತೇಶ ದೊಡ್ಡಗೌಡರ ಗೆಲುವು ಸಾಧಿಸಿದರು. ಈ ಬಾರಿ ಕಾಂಗ್ರೆಸ್​ನಿಂದ ಬಾಬಾಸಾಹೇಬ ಪಾಟೀಲ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರ ಸ್ಪರ್ಧೆ ಏರ್ಪಡಲಿದೆ.

ಸವದತ್ತಿ ಮೇಲೆ ಜಾರಕಿಹೊಳಿ ಕಣ್ಣು

ಬೆಳಗಾವಿ ಜಿಲ್ಲೆಯಲ್ಲಿಯೇ ಅಹಿಂದ ವರ್ಗದ ಮತಗಳನ್ನು ಅಧಿಕ ಸಂಖ್ಯೆಯಲ್ಲಿ ಹೊಂದಿರುವ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭೆಯ ಉಪಸಾಭಾಧ್ಯಕ್ಷ ಆನಂದ ಮಾಮನಿ ಅಭಿವೃದ್ಧಿ ಕೆಲಸಗಳ ಮೂಲಕ ಸತತ 3 ಬಾರಿ ಗೆಲುವು ಸಾಧಿಸಿದ್ದಾರೆ. 2013 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿನ ಕಾಂಗ್ರೆಸ್ ನಾಯಕರ ಒಳಜಗಳ ಹಾಗೂ ಪಕ್ಷೇತರವಾಗಿ ದಿ. ಆನಂದ ಚೋಪ್ರಾ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಲಿಲ್ಲ. ಇದೀಗ ಈ ಕ್ಷೇತ್ರದ ಮೇಲೆ ಜಾರಕಿಹೊಳಿ ಸಹೋದರರು ಕಣ್ಣಿಟ್ಟಿದ್ದರಿಂದ 2023 ಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಥವಾ ಕುಟುಂಬದ ಸದಸ್ಯರೊಬ್ಬರು ಸ್ಪರ್ಧಿಸಿದರೆ ಕಾಂಗ್ರೆಸ್-ಬಿಜೆಪಿ ನಡುವೆ ಜಿದ್ದಾಜಿದ್ದಿನ ಕುಸ್ತಿ ನಡೆಯಲಿದೆ. ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ಕೂಡ ಟಿಕೆಟ್ ಆಕಾಂಕ್ಷಿ.

ಅರಬಾವಿಯಲ್ಲಿ ಬಾಲಚಂದ್ರ ಭದ್ರ

ಸುಮಾರು 35 ವರ್ಷಗಳ ಕಾಲ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅರಬಾವಿ ವಿಧಾನಸಭಾ ಕ್ಷೇತ್ರದಲ್ಲಿ 2004ರಿಂದ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಭದ್ರವಾಗಿ ನೆಲೆಯೂರಿದ್ದಾರೆ. ಆದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಅರವಿಂದ ದಳವಾಯಿ, ಜೆಡಿಎಸ್​ನಿಂದ ಭೀಮಪ್ಪ ಗಡಾದ ಸ್ಪರ್ಧಿಸಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದರು. ಈ ಬಾರಿ ಜಾತಿ ಲೆಕ್ಕಾಚಾರದಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಮತದಾರರು ಅಧಿಕ ಸಂಖ್ಯೆಯಲ್ಲಿರುವುದರಿಂದ ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳಲು ಮುಖಂಡರು ಅಖಾಡಕ್ಕಿಳಿರುವುದರಿಂದ ಬಿಜೆಪಿಗೆ ಒಳಗೊಳಗೆ ಆತಂಕ ಉಂಟು ಮಾಡಿದೆ. ಜೆಡಿಎಸ್​ನ ಭೀಮಪ್ಪ ಗಡಾದ ಕ್ಷೇತ್ರದಲ್ಲಿ ಈಗಿನಿಂದಲೇ ಪ್ರಚಾರ ಆರಂಭಿಸಿದ್ದಾರೆ.

ಗೋಕಾಕದಲ್ಲಿ ರಮೇಶ್​ಗಿಲ್ಲ ಸರಿಸಾಟಿ

ರಾಜ್ಯ ರಾಜಕಾರಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಶಾಸಕ ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ರಾಜಕೀಯ ಪಕ್ಷಗಳಿಗಿಂತ ಜಾರಕಿಹೊಳಿ ಕುಟುಂಬವೇ ಮುಖ್ಯ. ಈ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಲೆಕ್ಕಕ್ಕಿಲ್ಲ. ಹಾಗಾಗಿ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಯಿಂದ ಸ್ಪರ್ಧಿಸಿ ಉಪಚುನಾವಣೆಯಲ್ಲಿ ದಾಖಲೆ ಅಂತರದಲ್ಲಿ ಗೆಲುವು ಸಾಧಿಸಿದರು. ಇಲ್ಲಿ ಮೇಲ್ನೋಟಕ್ಕೆ ಮಾತ್ರ ಕಾಂಗ್ರೆಸ್-ಬಿಜೆಪಿ ನೇರಾನೇರ ಸ್ಪರ್ಧೆ. ಆದರೆ, ವಾಸ್ತವದಲ್ಲಿ ಜಾರಕಿಹೊಳಿ ನಾಮಬಲವೇ ಇಲ್ಲಿ ಎಲ್ಲವೂ ಹೌದು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿದರೆ ಮಾತ್ರ ಸ್ಪರ್ಧೆ ಏರ್ಪಡಲಿದೆ. ಇಲ್ಲವಾದರೆ ಕ್ಷೇತ್ರದ ಮೇಲೆ ಬಿಗಿ ಹಿಡಿತ ಸಾಧಿಸಿರುವ ರಮೇಶ್ ಜಾರಕಿಹೊಳಿ ಗೆಲುವಿಗೆ ಬ್ರೇಕ್ ಹಾಕುವುದು ಈ ಬಾರಿಯೂ ಕಾಂಗ್ರೆಸ್ ಕಷ್ಟವಾಗಲಿದೆ.

ಹಳೇ ಹುಲಿಗಳ ಕದನ

ಚಳವಳಿಗಳ ನೆಲ, ಕೋಟೆಗಳ ನಾಡು ಖ್ಯಾತಿಯ ಹಾಗೂ ಅತ್ಯಂತ ಹಿಂದುಳಿದಿರುವ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಗಿಂತ ಜಾತಿ ರಾಜಕಾರಣವೇ ಮೇಲುಗೈ ಸಾಧಿಸಿದೆ. 2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಅಹಿಂದ ಅಸ್ತ್ರದ ಮೂಲಕ ಕಾಂಗ್ರೆಸ್​ನ ಅಶೋಕ ಪಟ್ಟಣ ಗೆಲುವು ಸಾಧಿಸಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿ, ಹಿಂದುತ್ವದ ಅಡಿಯಲ್ಲಿ ಬಿಜೆಪಿಯ ಮಹಾದೇವಪ್ಪ ಯಾದವಾಡ ಗೆಲುವು ಸಾಧಿಸಿದರು. ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಎರಡೂ ಪಕ್ಷಗಳಿಗೆ ಗೆಲುವು ಸುಲಭದ ಲೆಕ್ಕಾಚಾರವಾಗಿ ಉಳಿದಿಲ್ಲ. ಕಾಂಗ್ರೆಸ್​ಗೆ ಅಹಿಂದ ಅಸ್ತ್ರವಾದರೆ, ಬಿಜೆಪಿಗೆ ಬಿ.ಎಸ್. ಯಡಿಯೂರಪ್ಪ, ಪ್ರಧಾನಿ ಮೋದಿ ಅವರೇ ಆಸರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net