

ಬೆಂಗಳೂರು: 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿರುವ ನಟಿ ರಶ್ಮಿಕಾ ಮಂದಣ್ಣ, ಆಗಾಗ ಕಿರಿಕ್ ವಿಚಾರಕ್ಕೇ ಸುದ್ದಿಯಾಗುತ್ತಿದ್ದರು. ಇನ್ನು ಸಿನಿಮಾ ಸಂಗತಿಯ ಕಾರಣಕ್ಕೆ ಮತ್ತೆ ಮತ್ತೆ ಸುದ್ದಿಯಾಗುತ್ತಿರುವ ಈಕೆ ಇದೀಗ ಬೇರೊಂದು ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಅದು ಇನ್ಯಾವುದೂ ಅಲ್ಲ, ರಾಜಕೀಯ.
ಹೌದು.. ನಟಿ ರಶ್ಮಿಕಾ ಮಂದಣ್ಣ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎಂಬ ವಿಚಾರವೊಂದು ಸುದ್ದಿಯಲ್ಲಿದೆ. ಮಾತ್ರವಲ್ಲ, ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಾತುಕತೆಗಳೂ ನಡೆಯುತ್ತಿವೆ. ಹೀಗೆ ರಶ್ಮಿಕಾ ಮಂದಣ್ಣ ರಾಜಕೀಯಕ್ಕೆ ಬರಲಿದ್ದಾರೆ ಎಂಬ ವಿಷ್ಯ ಮುನ್ನೆಲೆಗೆ ಬರಲು ಕಾರಣ ಭವಿಷ್ಯ.
ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಯೂಟ್ಯೂಬ್ ಚಾನೆಲೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ರಶ್ಮಿಕಾ ಕುರಿತು ಮಾತನಾಡಿರುವ ಮಾತುಗಳೇ ಇದಕ್ಕೆಲ್ಲ ಕಾರಣ. ರಶ್ಮಿಕಾ ಶೀಘ್ರದಲ್ಲೇ ರಾಜಕೀಯಕ್ಕೆ ಬರಲಿದ್ದಾರೆ ಎಂಬುದನ್ನು ಅವರು ಈ ಸಂದರ್ಶನದಲ್ಲಿ ಹೇಳಿದ್ದಾರೆ.
ಹೈದರಾಬಾದ್ನಲ್ಲಿರುವ ರಶ್ಮಿಕಾ ಮನೆಯ ಪೂಜೆಯನ್ನು ವೇಣು ಸ್ವಾಮಿಯೇ ಮಾಡಿದ್ದರು. ಮಾತ್ರವಲ್ಲ ನಟ ರಕ್ಷಿತ್ ಜತೆ ಜಾತಕ ಹೊಂದಾಣಿಕೆ ಆಗದ ಕಾರಣ ಬೇರೆಯಾಗುವಂತೆ ನಾನೇ ಸಲಹೆ ನೀಡಿದ್ದೆ, ಅದಕ್ಕೆ ಅವರಿಬ್ಬರೂ ದೂರವಾಗಿದ್ದು ಎಂದೂ ಇವರು ಬಾಯಿಬಿಟ್ಟಿದ್ದಾರೆ. ನಾಗಚೈತನ್ಯ ಮತ್ತು ಸಮಂತಾ ಬಗ್ಗೆಯೂ ಅವರಿಬ್ಬರ ವಿಚ್ಛೇದನ ಆಗುತ್ತದೆ ಎಂದು ಭವಿಷ್ಯ ಹೇಳಿದ್ದೆ, ಹಾಗೇ ಆಯಿತು ಎಂದೂ ವೇಣು ಹೇಳಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ವೇಣು ಸ್ವಾಮಿ ಜ್ಯೋತಿಷ್ಯ ನಿಜವಾಗುವುದೇ, ರಶ್ಮಿಕಾ ರಾಜಕಾರಣಿ ಆಗಲಿದ್ದಾರೆಯೇ ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ.