

ಗಂಗೊಳ್ಳಿ: ಕನ್ನಡ ನಾಡು ಕಂಡ ಅತ್ಯದ್ಭುತ ಕವಿ ಕುಮಾರವ್ಯಾಸ. ಕನ್ನಡ ನೆಲದ ಮನೆ ಮನಗಳಲ್ಲಿ ಭಾರತ ಕತೆಯನ್ನು ನೆಲೆಯಾಗುವಂತೆ, ಆಪ್ತವಾಗುವಂತೆ ಮಾಡಿದ ಧೀಮಂತ ಕವಿ ಎಂದು ಕರ್ನಾಟಕ ಗಮಕ ಕಲಾ ಪರಿಷತ್ತು ಕುಂದಾಪುರ ಘಟಕ ಅಧ್ಯಕ್ಷ ಎಚ್. ಸುಜಯೀಂದ್ರ ಹಂದೆ ಹೇಳಿದರು.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ ಕುಂದಾಪುರ ಘಟಕ ಆಯೋಜನೆಯಲ್ಲಿ ಶನಿವಾರ ಕುಮಾರವ್ಯಾಸ ಸ್ಮತಿ ಮತ್ತು ಗಮಕ ಕಲಾ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಗೋಪಾಲ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಜಿ.ಎಸ್.ವಿ.ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕಾಶಿನಾಥ ಪೈ ಶುಭಹಾರೈಸಿದರು. ವಿದ್ಯಾರ್ಥಿಗಳಿಗಾಗಿ ಗಮಕಿ ಕಾವ್ಯ ಹಂದೆ ಕುಮಾರವ್ಯಾಸನ ಕರ್ಣ ಭೇದನ ಪ್ರಸಂಗದ ಕಾವ್ಯ ಭಾಗವನ್ನು ವಿವಿಧ ರಾಗಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಿದರು. ಸುಜಯೀಂದ್ರ ಹಂದೆ ವ್ಯಾಖ್ಯಾನ ನೀಡಿದರು. ಕಚೇರಿ ಪ್ರಬಂಧಕ ಶ್ರೀಧರ ಗಾಣಿಗ ಸ್ವಾಗತಿಸಿದರು. ಅಧ್ಯಾಪಕ ಆದಿನಾಥ ಕಿಣಿ ಕಾರ್ಯಕ್ರಮ ನಿರೂಪಿಸಿದರು.