ಹಸ್ತಪ್ರತಿ ಭಗವದ್ಗೀತೆ ರಕ್ಷಿಸಿದ ಮುಕುಂದ
ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಿ ಆನಂದ
ಪ್ರಶಾಂತ ಭಾಗ್ವತ, ಉಡುಪಿ
ಆರೇಳು ಶತಮಾನದ ಹಿಂದೆ ಬ್ರಿಟಿಷರು ಭಾರತದಿಂದ ಹೊತ್ತೊಯ್ದು ಇಂಗ್ಲಂಡ್ನಲ್ಲಿ ಇಟ್ಟುಕೊಂಡಿದ್ದ ದೇಶದ ಸರ್ವಶ್ರೇಷ್ಠ ‘ಧಾರ್ಮಿಕ ಜ್ಞಾನ’ವಾದ ಭಗವದ್ಗೀತಾ ಗ್ರಂಥದ ಹಸ್ತಪ್ರತಿಯನ್ನು ಮರಳಿ ಭಾರತಕ್ಕೆ ತರುವಲ್ಲಿ ಪ್ರೊ. ಪಿ.ಆರ್. ಮುಕುಂದ್ ಯಶ ಕಂಡಿದ್ದಾರೆ.
ಆಕ್ಸ್ಫರ್ಡ್ ಯುನಿವರ್ಸಿಟಿಯಲ್ಲಿ ಬಂಧಿಯಾಗಿದ್ದ ಭಾರತದ ‘ಜ್ಞಾನ’ಕ್ಕೆ ಲಕ್ಷಾಂತರ ರೂ. ಬೆಲೆತೆತ್ತು ಬಿಡುಗಡೆಗೊಳಿಸಿ, ತಂತ್ರಜ್ಞಾನದ ಮೂಲಕ ಸಂರಕ್ಷಿಸಿ, ಜ್ಞಾನಾಚಾರ್ಯನಾದ ಉಡುಪಿ ಶ್ರೀಕೃಷ್ಣನಿಗೆ ಸಮರ್ಪಸಿದ್ದಾರೆ. ತನ್ಮೂಲಕ ದೇಶದ ಸಂಪತ್ತು ಉಳಿಸುವಲ್ಲಿ ಮಹತ್ಕಾರ್ಯ ಮಾಡಿದ್ದಾರೆ.
ದೇಶದ ಹಸ್ತಪ್ರತಿಗಳ ರಕ್ಷಣೆ
ಪ್ರೊ. ಪಿ.ಆರ್. ಮುಕುಂದ್ ಅವರು ಕಳೆದ 51 ವರ್ಷದಿಂದ ಅಮೆರಿಕದಲ್ಲಿ ನೆಲೆಸಿದ್ದು, ಮೂಲತ: ಬೆಂಗಳೂರಿನ ಬಸವನಗುಡಿಯವರು. 2006ರಲ್ಲಿ ‘ತಾರಾ ಪ್ರಕಾಶನ’ ಎಂಬ ಲಾಭರಹಿತ ಸಂಸ್ಥೆ ಸ್ಥಾಪಿಸಿದ್ದು, ಟ್ರಸ್ಟ್ ಆಗಿ ಮುನ್ನಡೆಸುತ್ತಿದ್ದಾರೆ. ಭಾರತಕ್ಕೆ ಸಂರಕ್ಷಣೆ ಮತ್ತು ಆರ್ಕೈವಿಂಗ್ ಎಂಬ ಆಧುನಿಕ ತಂತ್ರಜ್ಞಾನ ಪರಿಚಯಿಸಿದ ಕೀರ್ತಿ ಈ ಸಂಸ್ಥೆಗಿದೆ. ಹೆಚ್ಚು ಹಾನಿಗೊಳಗಾದ ಹಸ್ತಪ್ರತಿಗಳನ್ನು ಸ್ಪೆಕ್ಟ್ರಲ್ ಇಮೇಜಿಂಗ್ ಎಂಬ ಸ್ವಂತ ತಂತ್ರಜ್ಞಾನದಿಂದ ಸೂಕ್ಷ್ಮ ಚಿತ್ರ ತೆಗೆದು, ಭಾರತದ ಸಾವಿರಾರು ಮೂಲ ಹಸ್ತಪ್ರತಿ ಉಳಿಸುವಲ್ಲಿ ಮಹತ್ತರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅನೇಕ ಸಲ ಇಂಗ್ಲಂಡ್ಗೆ ಭೇಟಿ
ಭಾರತದ ಪವಿತ್ರವಾದ ಭಗವದ್ಗೀತೆಯ ಅತ್ಯಂತ ಹಳೆಯದಾದ (1492ನೇ ಇಸವಿ) ನೇವಾರಿ ಲಿಪಿಯ ಲಿಖಿತ ಹಸ್ತಪ್ರತಿ ಇಂಗ್ಲಂಡ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಬೋಡ್ಲಿಯನ್ ಲೈಬ್ರರಿಯಲ್ಲಿತ್ತು. ಅದನ್ನು ಮರಳಿ ಭಾರತಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಅಮೆರಿಕದಿಂದ ಇಂಗ್ಲಂಡ್ಗೆ ಅನೇಕ ಬಾರಿ ಪ್ರೊ.ಮುಕುಂದ್ ಭೇಟಿ ನೀಡಿ, ಚರ್ಚಿಸಿದರು. ಪ್ರತಿಪುಟದ ಇಮೇಜ್ ಪಡೆಯಲು ಒಂದು ಬ್ರಿಟಿಷ್ ಪೌಂಡ್ ತೆತ್ತರು. ಕೊನೆಗೂ ಭಾರತದ ಅತ್ಯಮೂಲ್ಯ ಹಸ್ತಪ್ರತಿಯ ಹೈರೆಸಲ್ಯೂಶನ್ ಇಲೆಕ್ಟ್ರಾನಿಕ್ ಪ್ರತಿ ಪಡೆಯಲು ಸಫಲರಾದರು.
ಗೀತೆಯ ‘ವೆಫರ್ಫಿಚ್’ ಪ್ರತಿ
ಅಮೆರಿಕದ ನಾಸಾ ಸಂಸ್ಥೆಯು ಚಂದ್ರನ ಮೇಲೆ ಸಮಯದ ಕ್ಯಾಪ್ಸುಲ್ ಬಿಡಲು ವೆಫರ್ಫಿಚ್ (Waferfiche) ಎಂಬ ಸೆಮಿಕಂಡಕ್ಟರ್ ತಂತ್ರಜ್ಞಾನ ಬಳಸಿತ್ತು. ಈ ತಂತ್ರಜ್ಞಾನದಲ್ಲಿ ಲಿಪ್ಯಂತರ ಮಾಡಲೂ ಅವಕಾಶ ಇರುವುದರಿಂದ ಗೀತೆಯ ಪ್ರತಿಪುಟಕ್ಕೂ ಅಂದಾಜು 300-350 ಡಾಲರ್ ವೆಚ್ಚ ಮಾಡಿ, ಆಕ್ಸ್ಫರ್ಡ್ನಲ್ಲಿದ್ದ ಭಾರತದ ಮೂಲ ಭಗವದ್ಗೀತೆಯ ವೆಫರ್ಫಿಚ್ ಪ್ರತಿ ಸಿದ್ಧಪಡಿಸಿದ್ದಾರೆ. ಮಧ್ವ ನವಮಿಯಿಂದು (2025ರ ಫೆ.6) ಉಡುಪಿಗೆ ಬಂದು, ಪರ್ಯಾಯ ಪುತ್ತಿಗೆ ಸುಗುಣೇಂದ್ರ ಶ್ರೀಗಳ ಮೂಲಕ ಶ್ರೀಕೃಷ್ಣನಿಗೆ ಗೀತೆಯ ಆ ಪ್ರತಿಯನ್ನು ಸಮರ್ಪಿಸಿದ್ದಾರೆ.
ಸಾವಿರಾರು ವರ್ಷ ಬಾಳಿಕೆ
ದೇಶದ ಜ್ಞಾನ ಸಂಪತ್ತು ಮತ್ತೆ ನಶಿಸಬಾರದೆಂಬ ದೃಷ್ಟಿಯಿಂದ ಇಂಗ್ಲಂಡ್ ನಿಂದ ಮರಳಿ ತಂದ ಗೀತೆಯನ್ನು ವಿಶೇಷ ಪಾಲಿಮರ್ ಮೇಲೆ 3ಡಿ ಮುದ್ರಣ ಬಳಸಿ ತಾರಾ ಪ್ರಕಾಶನವು ಸಂರಕ್ಷಿಸಿದೆ. ಈ ಪ್ರತಿಯು ಬೆಂಕಿ, ನೀರು, ಗಾಳಿಯಿಂದಲೂ ನಾಶವಾಗದೆ ಸಾವಿರಾರು ವರ್ಷ ಬಾಳಿಕೆ ಬರಲಿದೆ. ಆಕ್ಸ್ಫರ್ಡ್ ಭಗವದ್ಗೀತೆಯು ಈ ತಂತ್ರಜ್ಞಾನ ಬಳಸಿ ಸಂರಕ್ಷಿಸಲ್ಪಟ್ಟ ದೇಶದ ಮೊದಲ ಹಸ್ತಪ್ರತಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.
ಬನ್ನಂಜೆ ಗೋವಿಂದಾಚಾರ್ಯರೇ ಪ್ರೇರಣೆ
ಬನ್ನಂಜೆ ಗೋವಿಂದಾಚಾರ್ಯರು ಯಾರೆಂದು ನನಗೆ ತಿಳಿದಿರಲೇ ಇಲ್ಲ. 1993ರಲ್ಲಿ ಆಕಸ್ಮಿಕವಾಗಿ ಅವರು ಭೇಟಿಯಾಗಿ, ಕೃಷ್ಣ ಹಾಗೂ ಮಧ್ವಾಚಾರ್ಯರು ಇರುವ ಫೋಟೋ ಕೊಟ್ಟು, ಇದನ್ನು ಮನೆಯಲ್ಲಿ ಇಟ್ಟುಕೊಳ್ಳಿ ಮುಂದೆ ಒಳ್ಳೆಯದಾಗುತ್ತದೆ ಎಂದಿದ್ದರು. ಆವರೆಗೂ ಸಹ ನನಗೆ ಆಧ್ಯಾತ್ಮಿಕ ವಿಚಾರದ ಜ್ಞಾನ ಇರಲಿಲ್ಲ. ಇಂದಿನ ಈ ಹಂತ ಕಾಣಲು ಬನ್ನಂಜೆ ಆಚಾರ್ಯರೇ ಪ್ರೇರಣೆ. ಆಕ್ಸ್ಫರ್ಡ್ನಲ್ಲಿ ದೊರತ ಗೀತೆ 14ನೇ ಶತಮಾನದ ಅಂತ್ಯದಾಗಿದ್ದು, 600ಕ್ಕೂ ಹೆಚ್ಚು ವರ್ಷ ಹಳೆಯದು. ಗೀತೆಯ ಎಲ್ಲ 700 ಶ್ಲೋಕವೂ ಇದೆ. ಆದರೆ, 10ನೇ ಅಧ್ಯಾಯದಲ್ಲಿ ಹೆಚ್ಚುವರಿ ಶ್ಲೋಕವಿದ್ದು, ಅದು ಪ್ರಸ್ತುತ ಚಾಲ್ತಿಯಲ್ಲಿರುವ ಗೀತೆಯಲ್ಲಿಲ್ಲ ಎನ್ನುತ್ತಾರೆ ಪ್ರೊ. ಪಿ.ಆರ್. ಮುಕುಂದ್.
ಭಾರತದಲ್ಲಿ ಆಳ್ವಿಕೆ ನಡೆಸಿದ್ದ ಮೊಘಲರು, ಬ್ರಿಟಿಷರು ನಮ್ಮವೈದಿಕ ಜ್ಞಾನ ಸಂಪತ್ತು ನಾಶ ಮಾಡಿದ್ದನ್ನು ಇತಿಹಾಸ ತಿಳಿಸುತ್ತದೆ. ಅದಕ್ಕೆ ಸಾಕ್ಷ್ಯವಾಗಿ ಭಗವದ್ಗೀತೆ ಇಂಗ್ಲಂಡ್ನಲ್ಲಿ ಬಂಧಿಯಾಗಿತ್ತು. ಭಾರತದ ಪ್ರಮುಖ ಜ್ಞಾನ ಸಂಪತ್ತನ್ನು ಮರಳಿ ಭಾರತಕ್ಕೆ ತಂದಿದ್ದಲ್ಲದೆ, ಅದನ್ನು ಗೀತಾಚಾರ್ಯನಾದ ಶ್ರೀಕೃಷನಿಗೇ ಸಮರ್ಪಣೆ ಮಾಡಿದ್ದಾರೆ. ತನ್ಮೂಲಕ ಪ್ರೊ. ಪಿ.ಆರ್. ಮುಕುಂದ್ ಅವರು ಭಾರತೀಯರೆಲ್ಲ ಹೆಮ್ಮೆ ಪಡುವ ಕಾರ್ಯ ಮಾಡಿದ್ದಾರೆ. ನಮ್ಮ ಗೀತಾ ಪರ್ಯಾಯದ ಅವಧಿಯಲ್ಲೇ ಈ ಕಾರ್ಯ ನಡೆದದ್ದು ಬಹಳ ಸಂತಸದ ವಿಚಾರ. ಅವರಿಗೆ ಇಂತಹ ಕಾರ್ಯ ಇನ್ನಷ್ಟು ನೆರವೇರಿಸಲು ಅನ್ನಬ್ರಹ್ಮನಾದ ಶ್ರೀಕೃಷ್ಣನು ಹೆಚ್ಚಿನ ಆಯುರಾರೋಗ್ಯ ದಯಪಾಲಿಸಲಿ ಎಂದು ಆಶಿಸುತ್ತೇವೆ.
| ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ
ಭಾರತೀಯರಿಗೆ ಇದೀಗ ನಮ್ಮ ಸಂಸ್ಕೃತಿ, ಭಾಷೆ, ಧರ್ಮ, ಆಹಾರ ಹಾಗೂ ನಮ್ಮ ಜ್ಞಾನದ ಬಗ್ಗೆಯೇ ಗೌರವ ಇಲ್ಲ. ಭಾರತದ ಜ್ಞಾನ ಸರ್ವಶ್ರೇಷ್ಠವಾಗಿದೆ. ವಿಶ್ವವೇ ನಮ್ಮ ಜ್ಞಾನ ಒಪ್ಪಿಕೊಳ್ಳುತ್ತಿದ್ದರೂ ನಮ್ಮವರಿಗೆ ಮಾತ್ರ ಹೆಮ್ಮೆಯೇ ಇಲ್ಲ. ಈಗಾಗಲೇ ಭಾರತದ ಅದೆಷ್ಟೋ ಪ್ರಕಾರದ ಜ್ಞಾನ ನಾಶವಾಗಿದೆ. ವಿನಾಶದ ಅಂಚಿನಲ್ಲಿರುವ ನಮ್ಮ ಆಧ್ಯಾತ್ಮಿಕ ಜ್ಞಾನ ಗ್ರಂಥಗಳ ರಕ್ಷಣೆ ಆಗಬೇಕು. ಮುಂದಿನ ಪೀಳಿಗೆಗೆ ನಮ್ಮ ಜ್ಞಾನ ತಲುಪಿಸಲು ಅವುಗಳನ್ನು ಉಳಿಸಲೇಬೇಕು.
| ಪ್ರೊ. ಪಿ.ಆರ್. ಮುಕುಂದ್. ತಾರಾ ಪ್ರಕಾಶನ ಸಂಸ್ಥಾಪಕ