

ಬೆಂಗಳೂರು: ಓದುಗರಿಗೆ ಅತೀ ಕಡಿಮೆ ದರದಲ್ಲಿ ಪುಸ್ತಕಗಳನ್ನು ಒದಗಿಸುತ್ತಿರುವ ಕನ್ನಡ ಪುಸ್ತಕ ಪ್ರಾಧಿಕಾರವು ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ‘ಕುಮಾರವ್ಯಾಸ ಭಾರತ’ ಪುಸ್ತಕವನ್ನು ಎರಡು ಸಂಪುಟಗಳಲ್ಲಿ ಮುದ್ರಿಸಲು ನಿರ್ಧರಿಸಿದೆ.
ಸುವರ್ಣ ಕರ್ನಾಟಕ ಮಹೋತ್ಸವದ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರಿಗೆ ‘ಕುಮಾರವ್ಯಾಸ ಭಾರತ’ವನ್ನು ಕಡಿಮೆ ದರದಲ್ಲಿ ಒದಗಿಸುವ ಉದ್ದೇಶದೊಂದಿಗೆ ಪ್ರಾಧಿಕಾರವು ಈ ಯೋಜನೆ ಕೈಗೆತ್ತುಕೊಂಡಿದೆ.
ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ಮೊದಲ ಹಂತದಲ್ಲಿ ಒಂದು ಸಾವಿರ ಪುಸ್ತಕಗಳನ್ನು ಮುದ್ರಿಸುವ ಗುರಿ ಹೊಂದಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳು ಹಾಗೂ ಬೆಂಗಳೂರಿನ ಕನ್ನಡ ಭವನದ ಆವರಣದಲ್ಲಿರುವ ಸಿರಿಗನ್ನಡ ಮಾರಾಟ ಮಳಿಗೆ ಮೂಲಕ ಕೃತಿಯ ಮಾರಾಟ ಮಾಡಲಾಗುವುದು. ಅತೀ ಕಡಿಮೆ ದರ (100 ರೂ.) ದಲ್ಲಿ ಓದಗರಿಗೆ ಒದಗಿಸುವುದು ಈ ಮುದ್ರಿತ ಯೋಜನೆಯ ಉದ್ದೇಶವಾಗಿದೆ.
ಟಿ.ವಿ. ವೆಂಕಟಾಚಲ ಶಾಸಿ ಅವರ ಸಂಪಾದಕತ್ವದ ಈ ಕೃತಿ ಈಗಾಗಲೇ ಕರ್ನಾಟಕ ಗಣಕ ಪರಿಷತ್ತು ವತಿಯಿಂದ ಮುದ್ರಿತವಾಗಿ ಮಾರಾಟವಾಗುತ್ತಿದೆ. ಹಾಗಾಗಿ ಅವರಿಂದ ಕೃತಿಯ ಮುದ್ರಣದ ಹಕ್ಕು ಪಡೆದು ಪ್ರಾಧಿಕಾರದಿಂದ ಪ್ರಕಟಿಸಲಾಗುವುದು. ಈ ಸಂಬಂಧ ಈಗಾಗಲೇ ಇ-ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಮುದ್ರಣ ಕಾರ್ಯ ಆರಂಭವಾಗಲಿದೆ. ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವದ ವೇಳೆಗೆ ಪುಸ್ತಕಗಳು ಸಿದ್ಧಗೊಳ್ಳಲಿವೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.