ಕುಕ್ಕೆ ದೇವಳ ಸಿಬ್ಬಂದಿಯಿಂದ ಕುಮಾರಧಾರಾ ಸ್ವಚ್ಛತೆ

kukke
ಕುಕ್ಕೆ ದೇವಳದ ಸಿಬ್ಬಂದಿ ಕುಮಾರಧಾರಾ ನದಿಗಿಳಿದು ನದಿಯಲ್ಲಿದ್ದ ಬಟ್ಟೆ ಹೊರತೆಗೆದರು.
Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿ ಸ್ವಯಂಪ್ರೇರಿತರಾಗಿ ಮಂಗಳವಾರ ಕುಮಾರಧಾರಾ ನದಿ ಸ್ವಚ್ಛತಾ ಕಾರ್ಯ ನೆರವೇರಿಸಿದರು. ನದಿಯೊಳಗೆ ಇಳಿದು ಒಡಲಾಳದಲ್ಲಿದ್ದ ಬಟ್ಟೆಗಳನ್ನು ಹೊರ ತೆಗೆದರು.

ಮಂಗಳವಾರ ಮಧ್ಯಾಹ್ನ ದೇವಳದ 25ಕ್ಕೂ ಅಧಿಕ ಸಿಬ್ಬಂದಿ ಶ್ರೀ ದೇವರ ಅವಭೃತ ಸ್ನಾನ ಮತ್ತು ತೆಪ್ಪೋತ್ಸವ ನಡೆಯುವ ಜಳಕದ ಗುಂಡಿಯಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿದರು. ಬಿರು ಬೇಸಿಗೆಯಲ್ಲೂ ಸಮೃದ್ಧ ನೀರಿನೊಂದಿಗೆ ತುಂಬಿದ್ದ ಕುಮಾರಧಾರಾದ ಒಡಲಾಳದಲ್ಲಿ ಭಕ್ತರು ಹಾಕಿದ್ದ ಬಟ್ಟೆಗಳನ್ನು ದೊಡ್ಡ ದೊಡ್ಡ ಕೋಲಿನಿಂದ ಕೆದಕಿ ತೆಗೆದು ದಡಕ್ಕೆ ತಂದು ಹಾಕಿದರು. ಸ್ನಾನಕ್ಕಾಗಿ ಬಂದ ಭಕ್ತರೂ ಸಹಕಾರ ನೀಡಿದರು. ತ್ಯಾಜ್ಯ ವಿಲೇವಾರಿ ಘಟಕಕ್ಕೆ ತ್ಯಾಜ್ಯ ರವಾನಿಸಲಾಯಿತು.

ದೇವಳದ ಆರೋಗ್ಯ ನಿರೀಕ್ಷಕ ಯೋಗೀಶ್ ಎಂ.ವಿಟ್ಲ, ಸಿಬ್ಬಂದಿಗಳಾದ ರಾಜಲಕ್ಷ್ಮೀ ಪಿ.ಶೆಟ್ಟಿಗಾರ್, ಮೂಕಾಂಬಿಕಾ ಮಾರರ್, ರೋಹಿತಾಕ್ಷಿ, ಲೋಕೇಶ್ ಗೆಜ್ಜೆ, ಮಹೇಶ್ ಕುಮಾರ್ ಎಸ್, ರಮೇಶ್ ಭಟ್, ಉಮೇಶ್ ಶೆಟ್ಟಿ, ವೆಂಕಟ್ರಮಣ ಗೌಡ, ನಾಗರಾಜ್ ಸೇರಿದಂತೆ 25ಕ್ಕೂ ಅಧಿಕ ಸಿಬ್ಬಂದಿ ಸ್ವಚ್ಛತೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net