ಜಾತ್ರೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ ಕುಕ್ಕೆ ಕ್ಷೇತ್ರ : ಶ್ವೇತವರ್ಣಮಯ ರಾಜಗೋಪುರ : ಆಕರ್ಷಕ ವಿದ್ಯುತ್ ದೀಪಾಲಂಕಾರ

New Project (17)
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವಕ್ಕಾಗಿ ಪುಣ್ಯಕ್ಷೇತ್ರ ಭರದಿಂದ ಸಿದ್ಧಗೊಳ್ಳುತ್ತಿದೆ. ದೇವಸ್ಥಾನ ಮತ್ತು ಕ್ಷೇತ್ರದ ಕಟ್ಟಡಗಳು ಸುಣ್ಣಬಣ್ಣಗಳಿಂದ ಶೃಂಗಾರಗೊಳ್ಳುತ್ತಿದೆ. ರಾಜಗೋಪುರಕ್ಕೆ ವರ್ಣಾಲಂಕಾರ ಮಾಡುವ ಕಾರ್ಯ ಸಾಗುತ್ತಿದ್ದು ಶ್ವೇತವರ್ಣದಿಂದ ಗೋಪುರ ಕಂಗೊಳಿಸುತ್ತಿದೆ.

ಶ್ರೀ ದೇವಳ, ಹೊರಾಂಗಣ, ಶೃಂಗೇರಿ ಮಠ, ಹೊಸೊಳಿಗಮ್ಮನ ಗುಡಿ, ಮುಖ್ಯಪ್ರಾಣ ಗುಡಿ, ಗಣಪತಿ ದೇವಸ್ಥಾನಗಳ ಗೋಡೆಗಳಿಗೆ ಬಣ್ಣ ಹಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ. ಅದೇ ರೀತಿ ಆದಿ ಸುಬ್ರಹ್ಮಣ್ಯ ರಸ್ತೆಯ ಸ್ವಾಗತ ಕಮಾನು, ಷಣ್ಮುಖ ಪ್ರಸಾದ ಭೋಜನ ಶಾಲೆ, ಕಾಶಿಕಟ್ಟೆ ಮತ್ತು ಇಲ್ಲಿನ ಗಣಪತಿ ಹಾಗೂ ಆಂಜನೇಯ ಗುಡಿಯು ಸುಣ್ಣ-ಬಣ್ಣಗಳಿಂದ ಸಿದ್ಧಗೊಳ್ಳುತ್ತಿದೆ. ಅಲ್ಲದೆ ಕುಮಾರಧಾರಾದ ಸ್ವಾಗತ ಗೋಪುರ, ಬಿಲದ್ವಾರ, ಸವಾರಿ ಮಂಟಪ ಕೂಡಾ ವರ್ಣಾಲಂಕಾರಗೊಳ್ಳುತ್ತಿದೆ. ಕಾಶಿಕಟ್ಟೆ ಸೇರಿದಂತೆ ಕ್ಷೇತ್ರಾದ್ಯಂತ ವಿದ್ಯುದ್ದೀಪಾಲಂಕಾರ ವ್ಯವಸ್ಥೆ ಸಜ್ಜುಗೊಳ್ಳುತ್ತಿದೆ. ಕುಮಾರಧಾರಾ, ರಾಜರಸ್ತೆ, ಆದಿಸುಬ್ರಹ್ಮಣ್ಯ, ನೂಚಿಲ, ಕುಲ್ಕುಂದ ರಸ್ತೆಗಳಲ್ಲಿ ವಿದ್ಯುತ್ ದೀಪ ವ್ಯವಸ್ಥೆ ಅಳವಡಿಸುವ ಕಾರ್ಯ ಸಮಾಪ್ತಿಯಾಗಿದೆ.

ಪಾರ್ಕಿಂಗ್ ಸ್ಥಳದಲ್ಲಿ ಹಾಗೂ ಕ್ಷೇತ್ರದ ಇತರ ಕಡೆಗಳಲ್ಲಿ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಕಾ ಕಾರ್ಯ ನೆರವೇರುತ್ತಿದೆ. ಶ್ರೀ ದೇವಳದ ಸಿಬ್ಬಂದಿ ಜಾತ್ರಾ ಮಹೋತ್ಸವದ ಪೂರ್ವಸಿದ್ಧತೆಗಾಗಿ ನಡೆಯುವ ಕೆಲಸ ಕಾರ್ಯದಲ್ಲಿ ಹಗಲಿರುಳೆನ್ನದೆ ಶ್ರಮವಹಿಸುತ್ತಿದ್ದಾರೆ. ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜ್ ಮಾರ್ಗದರ್ಶನ ನೀಡುತ್ತಿದ್ದಾರೆ.

ನೂತನ ಭೋಜನ ಛತ್ರ ನಿರ್ಮಾಣ

ಪಾರ್ಕಿಂಗ್ ಸ್ಥಳ, ಕುಮಾರಧಾರಾದಿಂದ ರಾಜಗೋಪುರ ತನಕ ಸ್ವಚ್ಛತಾ ಕಾರ್ಯ ಪ್ರಥಮ ಹಂತದಲ್ಲಿ ನೆರವೇರಿದೆ. ನ.30ರಂದು ಬೃಹತ್ ಸ್ವಚ್ಛತಾ ಸೇವೆ ನೆರವೇರಲಿದೆ. ನೂತನ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ, ಅಂಗಡಿಗುಡ್ಡೆಯಲ್ಲಿ ನೂತನ ಭೋಜನ ಛತ್ರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net