

ಕುಕನೂರು: ಸರ್ವರಲ್ಲೂ ಭಾರತೀಯರೆಂಬ ಭಾವ ಮೂಡಬೇಕು. ಧರ್ಮ-ಜಾತಿ ಎನ್ನುವ ಮೊದಲು ನಾವು ಭಾರತೀಯರು ಎನ್ನಬೇಕು ಎಂದು ಕುಕನೂರಿನ ಅನ್ನದಾನಿಶ್ವರ ಶಾಖಾ ಮಠದ ಡಾ.ಶ್ರೀಮಹಾದೇವ ಸ್ವಾಮೀಜಿ ಹೇಳಿದರು.
ತಾಲೂಕಿನ ತಳಬಾಳ ಗ್ರಾಮದಲ್ಲಿ ನೂತನ ಮಸೀದಿ ಉದ್ಘಾಟಿಸಿ ಗುರುವಾರ ಉದ್ಘಾಟಿಸಿ ಮಾತನಾಡಿದರು. ನಮ್ಮ ಧರ್ಮ ಶ್ರೇಷ್ಠ, ನಮ್ಮ ಜಾತಿ ಶ್ರೇಷ್ಠ ಎನ್ನುವ ಮೊದಲು ಭಾರತ ಶ್ರೇಷ್ಠವೆಂಬ ಭಾವ ಬೆಳೆಯಬೇಕು. ಸಂತರು, ಶರಣರು, ದಾರ್ಶನಿಕರ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶಿಯಾಗಬೇಕು.
ಹಾನಗಲ್ ಶ್ರೀಗುರುಕುಮಾರ ಸ್ವಾಮೀಜಿ, ನಾಡಿನ ಎಲ್ಲ ಗ್ರಂಥಗಳು ಶ್ರೇಷ್ಠವೆಂದು ಹೇಳಿದವರು. ಇದಕ್ಕೆ ತಳಕಲ್, ಭಾನಾಪುರ, ತಳಬಾಳ ಇತರ ಗ್ರಾಮಗಳಲ್ಲಿ ಹಿಂದು-ಮುಸ್ಲಿಮರು ಭಾವೈಕ್ಯದಿಂದ ಮೊರಹಂ ಆಚರಿಸುವುದು ಸಾಕ್ಷಿಯಾಗಿದೆ. ಬಹಳಷ್ಟು ಮುಸ್ಲಿಮರು ವೀರಶೈವ ಮಠದಲ್ಲಿಯೇ ವ್ಯಾಸಂಗ ಮಾಡಿ ಉನ್ನತ ಹುದ್ದೆಗೇರಿದ್ದಾರೆ.
ಇಂದಿಗೂ ಅನ್ನದಾನೇಶ್ವರ ಮಠದ ಭಕ್ತರಾಗಿದ್ದಾರೆ. ತಳಬಾಳ ಗ್ರಾಮದ ಶಿಕ್ಷಕ ಮಲಿಕ್ಸಾಬ್ ನೂರ್ಬಾಷ್ ಅವರು ನಮ್ಮ ಮಠದಲ್ಲಿ ಶಿಕ್ಷಣ ಪಡೆದಿದ್ದು, ಇಂದಿಗೂ ಮಠವನ್ನು ಸ್ಮರಣೆ ಮಾಡುತ್ತಾರೆ ಎಂದರು.
ಶಿಕ್ಷಕ ಅನ್ವರ್ಸಾಬ್ ಮುಧೋಳ ಮಾತನಾಡಿ, ಮುಸ್ಲಿಂರಿಗೆ ಮೊಹರಂ ತಿಂಗಳೆಂದರೆ ಮೊದಲ ವರ್ಷ ಪ್ರಾರಂಭವಾದಂತೆ. ವಿಶೇಷವಾಗಿ ಹಸನ್-ಹುಸೇನ್ ಸ್ಮರಣಾರ್ಥ ಈ ಹಬ್ಬ ಆಚರಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇದು ಭಾವೈಕ್ಯದ ಹಬ್ಬವಾಗಿದೆ ಎಂದರು.
ಡಾ.ಶ್ರೀಮಹಾದೇವ ಸ್ವಾಮೀಜಿಗೆ ಗ್ರಾಮದ ಹಿಂದು-ಮುಸ್ಲಿಮರು ಪಾದಪೂಜೆ ನೆರವೇರಿಸಿದರು. ನಂತರ ಮುಸ್ಲಿಂ ಸಂಪ್ರದಾಯದಂತೆ ಪೂಜೆ ನಡೆಯಿತು. ತಳಬಾಳದಲ್ಲಿ ಮಲ್ಲಿಕ್ ಸಾಬ್ ಹುಸೇನ್ಸಾಬ್ ನೂರ್ಬಾಷ ಎನ್ನುವ ಒಂದೇ ಕುಟುಂಬವಿದ್ದರೂ ಮೊಹರಂ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾ ಬಂದಿದ್ದಾರೆ.
ಮುಸ್ಲಿಂ ಧರ್ಮಗುರುಗಳಾದ ಮೌಲಾನಾ ತಾಜುದೀನ್ಸಾಬ್, ಕಲಾಂಸಾಬ್ ಮುಲ್ಲಾ, ಅಂಜುಮನ್ ಪಂಚ ಕಮಿಟಿ ಅಧ್ಯಕ್ಷ ರಾಜಾಸಾಹೇಬ್, ಹುಚ್ಚಯ್ಯ ಸಸಿಮಠ ಸ್ವಾಮಿ, ಗ್ರಾಪಂ ಸದಸ್ಯ ದೇವೇಂದ್ರಪ್ಪ ಕಮ್ಮಾರ, ಪ್ರಮುಖರಾದ ಮೌಲಾಹುಸೇನ್ ಬಿಸರಳ್ಳಿ, ಮಲ್ಲಣ್ಣ ಸಾದರ, ಮರ್ದಾನ್ಸಾಬ್ ಮಿಠಾಯಿ, ಜಂಭಯ್ಯ ಹಿರೇಮಠ ಇತರರಿದ್ದರು.