ದೇಗುಲಗಳ ನೆಲೆಬೀಡು ಕೂಡ್ಲೂರು

IMG-20231008-WA0036
Published on

ಗ್ರಾಮದಲ್ಲಿವೆ 36 ದೇಗುಲ - ಮಹರ್ಷಿಗಳು ಯಾಗ ಮಾಡಿದ ಪುಣ್ಯಕ್ಷೇತ್ರ

ರಾಜ ರಾಜ ಚೋಳನ ಆಳ್ವಿಕೆ ಶರಗುಣ ರಾಮನ ನೆಲೆವೀಡು

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ತಾಲೂಕು ಕೇಂದ್ರದಿಂದ 6 ಕಿ.ಮೀ. ದೂರವಿರುವ ಕೂಡ್ಲೂರು ತಾಲೂಕಿನ ವಿಶಿಷ್ಟ ಗ್ರಾಮಗಳಲ್ಲಿ ಒಂದು. ದೇಗುಲಗಳ ಬೀಡು ಎಂದು ಕರೆಸಿಕೊಳ್ಳುವ ಈ ಗ್ರಾಮ ಸರ್ವ ಜನಾಂಗವನ್ನು ಸಾಕಿ ಸಲಹುತ್ತಿದೆ.

ದೊಡ್ಡಗ್ರಾಮ ಎಂದು ಹೆಸರುಗಳಿಸಿರುವ ಕೂಡ್ಲೂರು ಗ್ರಾಮಕ್ಕೆ ಸಾಕಷ್ಟು ಇತಿಹಾಸವಿದೆ. ಗ್ರಾಮದ ತುಂಬಾ ದೇವಾಲಯಗಳಿರುವುದು ವಿಶೇಷ. ಗ್ರಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇತಿಹಾಸದ ಪುಟದಲ್ಲಿ ದಾಖಲಾಗಿರುವ ವಿಶಿಷ್ಟ ಗ್ರಾಮ ಎಂದರೆ ತಪ್ಪಾಗಲಾರದು.

ಕೂಡಲೂರು ಕೂಡ್ಲೂರಾಯಿತು! :

ಇದು ಈ ಹಿಂದೆ ಬ್ರಾಹ್ಮಣರ ಅಗ್ರಹಾರವಾಗಿತ್ತು. ಸಾರಂಗಧರನ ಯುವರಾಜನ ಕೈ ಕಾಲುಗಳು ಈ ಗ್ರಾಮದ ಬಳಿ ಕೂಡಿಕೊಂಡು ಆಕಾರ ಪಡೆದ ಕಾರಣ ಇದು ಕೂಡಲೂರಾಯಿತು. ಗ್ರಾಮದ ಬಳಿ ಕಣ್ವ ನದಿ ಕುಡುಗೋಲಿನ ಆಕಾರದಲ್ಲಿ ಹರಿಯುವುದರಿಂದ ನಂತರ ಕುಡುಲೂರಾಯಿತು ಎಂಬ ಪ್ರತೀತಿ ಇದೆ. ಕಾಲಕ್ರಮೇಣ ಈ ಗ್ರಾಮ ಕೂಡ್ಲೂರು ಎಂದು ಕರೆಯಲ್ಪಟ್ಟಿದೆ. ಯಾಜ್ಞವಲ್ಕ್ಯ ಹಾಗೂ ಕಣ್ವ ಮಹರ್ಷಿಗಳು ಯಾಗ ಮಾಡಿದ ಪುಣ್ಯಕ್ಷೇತ್ರ ಎಂಬ ಹೆಗ್ಗಳಿಕೆಯೂ ಗ್ರಾಮಕ್ಕಿದೆ. ಈ ಪ್ರದೇಶವನ್ನು ರಾಜ ರಾಜ ಚೋಳನು ಆಳ್ವಿಕೆ ನಡೆಸಿದ್ದು, ಈ ಗ್ರಾಮವನ್ನು ಹೈದರ್ ಅಲಿ ಫಕೀರನಿಗೆ ಇನಾಂ ಕೊಟ್ಟನೆಂಬ ಮಾಹಿತಿ ಶಾಸನದಿಂದ ತಿಳಿದುಬಂದಿದೆ. ಅತಿ ವಿಶಾಲವಾದ ಕೂಡ್ಲೂರು ಕೆರೆಯೂ ಇದೇ ಕಾಲದಲ್ಲಿ ನಿರ್ಮಾಣವಾಗಿದೆ.

ಒಂದೇ ರಾತ್ರಿಯಲ್ಲಿ ನಿರ್ಮಾಣ!

ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಶರಗುಣ ರಾಮದೇವರ ದೇವಸ್ಥಾನ ಸಾವಿರಾರು ವರ್ಷಗಳ ಇತಿಹಾಸ ಒಳಗೊಂಡಿದೆ. ದಕ್ಷಿಣ ಭಾರತದ ಪ್ರಸಿದ್ಧ ರಾಜಮನೆತನವಾದ ಗಂಗ ಸಾಮ್ರಾಜ್ಯದ ಅರಸರಿಂದ ನಿರ್ಮಾಣವಾಗಿರುವ ರಾಜ್ಯದ ಸುಪ್ರಸಿದ್ಧ ದೇವಸ್ಥಾನಗಳಲ್ಲಿ ಇದು ಕೂಡ ಒಂದು. ಈ ದೇಗುಲವನ್ನು ಒಂದೇ ರಾತ್ರಿಯಲ್ಲಿ ನಿರ್ಮಿಸಿದ್ದಾರೆ ಎನ್ನುವ ದಂತಕಥೆ ಇದೆ. ಈ ದೇವಸ್ಥಾನವನ್ನು ಚೋಳ ಸಾಮ್ರಾಜ್ಯದ ಪ್ರಸಿದ್ಧ ದೊರೆಗಳಾದ ರಾಜ ರಾಜ ಚೋಳ ಮತ್ತು ರಾಜೇಂದ್ರನ ಚೋಳನ ಕಾಲದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಹೊಯ್ಸಳ ಮನೆತನದ ವೀರ ಬಲ್ಲಾಳ ದೇವಸ್ಥಾನಕ್ಕೆ ಸಾಕಷ್ಟು ದತ್ತಿಗಳನ್ನು ನೀಡಿರುವ ಉಲ್ಲೇಖ ದೇವಸ್ಥಾನದ ಗೋಡೆಯ ಮೇಲಿನ ಶಾಸನದಲ್ಲಿದೆ. ಅಲ್ಲದೆ, ವಿಜಯನಗರದ ಅರಸರು ಕಾಲಕಮೇಣ ದೇವಸ್ಥಾನವನ್ನು ಅಭಿವೃದ್ಧಿಪಡಿಸಿದ್ದಾರೆ. ದೇಗುಲದ ಆವರಣದಲ್ಲಿ ಹಳೆಯ ಶಿಲಾಮೂರ್ತಿಗಳು, ಶಾಸನಗಳ ಸಹಿತ ಅನೇಕ ಐತಿಹಾಸಿಕ ಪಳೆಯುಳಿಕೆಗಳನ್ನು ಕಾಣಬಹುದಾಗಿದೆ. ಪ್ರಾಂಗಣದಲ್ಲಿ ಬೃಹತ್ ಬೃಂದಾವನವಿದೆ. ದೇವಸ್ಥಾನದ ಮುಂಭಾಗ ಗರುಡಗಂಬ ಹಾಗೂ ವಿಜಯನಗರದ ಕಾಲದ ಮಂಟಪ ಇರುವುದರಿಂದ ದೇವಸ್ಥಾನವು ಸುಂದರ ಆಕೃತಿ ಹೊಂದಿದೆ.

ಇಲ್ಲುಂಟು ಹಲವು ಶಾಸನ !

ಗ್ರಾಮದ ಇತಿಹಾಸದ ಕುರುಹಾಗಿ ಗ್ರಾಮದ ಹಲವೆಡೆ ತಮಿಳು ಹಾಗೂ ಹಳೆಗನ್ನಡದ ಶಾಸನಗಳನ್ನು ಕಾಣಬಹುದಾಗಿದೆ. ರಾಮದೇವರ ದೇವಸ್ಥಾನದ ಆವರಣದಲ್ಲಿ ಗಂಗರಸರು, ಚೋಳರು, ಹೊಯ್ಸಳರು ಹಾಗೂ ವಿಜಯನಗರ ಕಾಲದ ಹಲವು ತಮಿಳು ಮತ್ತು ಕನ್ನಡ ಶಾಸನಗಳಿವೆ. ಗ್ರಾಮದ ಹಲವೆಡೆ 18 ಶಾಸನಗಳು ಜತೆಗೆ ವೀರಗಲ್ಲು, ಮಾಸ್ತಿಗಲ್ಲುಗಳು ಇವೆ. ಈ ಗ್ರಾಮಕ್ಕೆ ಸಂಬಂಧಿಸಿದಂತೆ ಕೂಡ್ಲೂರು ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯ ಮಂಡಿಸಿ, ಗ್ರಾಮದ ಡಾ. ಕೂಡ್ಲೂರು ವೆಂಕಟಪ್ಪ ಎಂಬುವವರು ಪಿಎಚ್‌ಡಿ ಪದವಿ ಪಡೆದಿದ್ದಾರೆ. ಇವರೊಂದಿಗೆ, ಸಾಹಿತಿ ವಿಜಯ್ ರಾಂಪುರ ಹಾಗೂ ಗ್ರಾಮದ ಯುವಲೇಖಕ ಲಕ್ಷ್ಮಿ ಕಿಶೋರ್ ಅರಸು ಎಂಬುವವರು ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಇದಲ್ಲದೆ ಹೊಯ್ಸಳರ ವೀರ ಬಲ್ಲಾಳನ ಶಾಸನವು ಇದೇ ಕೂಡ್ಲೂರು ಗ್ರಾಮದಲ್ಲಿ ದೊರಕಿದೆ.


ಪಂಚಲಿಂಗ ಕ್ಷೇತ್ರವೂ ಹೌದು!

ಗ್ರಾಮದಲ್ಲಿ 36 ದೇವಸ್ಥಾನಗಳಿದ್ದು, ತಾಲೂಕಿನಲ್ಲಿಯೇ ಹೆಚ್ಚು ದೇವಸ್ಥಾನಗಳನ್ನು ಹೊಂದಿರುವ ಗ್ರಾಮ ಎಂಬ ಹೆಗ್ಗಳಿಕೆ ಪಡೆದಿದೆ. ರಾಮದೇವರೊಂದಿಗೆ, ಇಲ್ಲಿರುವ ಮಂಗಳೇಶ್ವರ ದೇವಾಲಯವೂ ಪ್ರಾಚೀನ ಇತಿಹಾಸ ಹೊಂದಿದೆ. ಗಂಗರ ಕಾಲದಲ್ಲಿ ಮಂಗಳೇಶ್ವರ ದೇವಸ್ಥಾನವನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಗ್ರಾಮದಲ್ಲಿ ಪಂಚಲಿಂಗ ಗುಡಿಗಳಿವೆ. ಇದರಿಂದಾಗಿ ಗ್ರಾಮವನ್ನು ಪಂಚಲಿಂಗ ಕ್ಷೇತ್ರ ಎಂತಲೂ ಕರೆಯುತ್ತಾರೆ.

ಪುರಾತನವಾದ ಕಲ್ಯಾಣಿಯೂ ಇಲ್ಲಿನ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಮತ್ತೊಂದು ವಿಶೇಷತೆ ಎಂದರೆ, ವಿಜಯನಗರ ಅರಸರ ಪುರದೇವತೆಗಳು ಹಾಗೂ ಕುಲದೇವತೆಯನ್ನು ಪ್ರಸ್ತುತ ಈ ಗ್ರಾಮದಲ್ಲಿ ಕಾಣಬಹುದಾಗಿದೆ. ವಿಜಯನಗರದ ಪುರದೇವತೆಗಳಾದ ಕುಲದೇವಿ ಶ್ರೀ ದಂಡಮ್ಮ (ಭುವನೇಶ್ವರಿ), ಲಕ್ಷ್ಮಿನರಸಿಂಹ ಸ್ವಾಮಿ, ಲಕ್ಷ್ಮಿ ದೇವಿ, ಮಸಣಮ್ಮ, ಶ್ರೀರಂಗದಮ್ಮ, ಚಿಕ್ಕಮ್ಮದೇವಿ, ಮಳವಳ್ಳಿ ಅಮ್ಮ ಮುಂತಾದ ದೇವರುಗಳು ನೆಲೆಸಿವೆ. ಇದಕ್ಕೂ ಮುಂಚೆಯೇ ಈ ಗ್ರಾಮದಲ್ಲಿ ಚೋಳರ ಹಾಗೂ ಗಂಗರಸರ ಕಾಲದ ದೇವರುಗಳಾದ ಶ್ರೀರಾಮ ದೇವರು, ಮಂಗಳೇಶ್ವರ ಸ್ವಾಮಿ, ಚಲ್ಲಮ್ಮ ತಾಯಿ, ಕರಿಯಮ್ಮ, ಒಕ್ಕಳಮ್ಮ, ಮೂಕಾಂಬಿಕೆ, ಆಂಜನೇಯಸ್ವಾಮಿ, ಚೌಡೇಶ್ವರಿ, ಕಾಲಭೈರವೇಶ್ವರ, ಸಾಲುಮನೆಯ ದೇವರುಗಳು ನೆಲೆಸಿದವು ಎನ್ನಲಾಗಿದೆ. ವಿಜಯನಗರ ಅರಸರ ಕುಲದೇವತೆ ದಂಡಮ್ಮ ತಾಯಿಯನ್ನು ಗ್ರಾಮ ದೇವತೆಯಾಗಿ ಆರಾಧಿಸಲಾಗುತ್ತಿದೆ.


ವಿಜಯನಗರದ ಕಾಲದ ಹಲವು ಆಚರಣೆಗಳು ಗ್ರಾಮದಲ್ಲಿ ಇಂದಿಗೂ ಮುಂದುವರಿಯುತ್ತಿದ್ದು, ಆ ಕಾಲದ ನಂಟಿಗೆ ಸಾಕ್ಷಿ ಎನ್ನಬಹುದಾಗಿದೆ. ಗ್ರಾಮದಲ್ಲಿರುವ ದೇವಾಲಯಗಳು ವಿಶಿಷ್ಟವಾದ ಹಿನ್ನೆಲೆ ಹೊಂದಿದ್ದು, ಗ್ರಾಮದಲ್ಲಿ ಎಲ್ಲ ದೇವರುಗಳನ್ನು ಆರಾಧಿಸುತ್ತ, ಹಬ್ಬಹರಿದಿನಗಳನ್ನು ಗ್ರಾಮದ ಜನತೆ ಆಚರಿಸಿಕೊಂಡು ಹೋಗುತ್ತಿದ್ದಾರೆ.

ನಂಬುಗೆಯ ಬೂದಿತಿಟ್ಟು!

ರಾಮಗುಡಿಯ ಎಡ ಭಾಗದಲ್ಲಿ ಬೂದಿತಿಟ್ಟು ಇದ್ದು, ಯಾಜ್ಞವಲ್ಕ್ಯ ಮಹರ್ಷಿಗಳು ಯಜ್ಞ ಮಾಡಿದ ಸ್ಥಳವಾದುದರಿಂದ ಆ ಬೂದಿಯೇ ಇದು ಎಂಬ ನಂಬಿಕೆಯಿದೆ. ಇದರೊಂದಿಗೆ, ರಾಮಾಯಣದಲ್ಲಿ ಬರುವ ಜಟಾಯು ಪಕ್ಷಿಯ ದಹನ ಕ್ರಿಯೆ ಈ ಜಾಗದಲ್ಲಿ ಆಗಿದ್ದು, ಅದರ ಬೂದಿ ಇದು ಎಂಬ ಮತ್ತೊಂದು ನಂಬಿಕೆ ಇದೆ. ಇಂದಿಗೂ ಇಲ್ಲಿಯ ಮಣ್ಣು ಬೂದಿ ಮಿಶ್ರಿತವಾಗಿದ್ದು, ಈ ಮಣ್ಣು ಔಷಧ ಗುಣ ಹೊಂದಿದೆ, ಇದರಿಂದ ಹಲವು ರೋಗಗಳು ವಾಸಿಯಾಗಿರುವ ನಿದರ್ಶನಗಳಿವೆ.
ಒಟ್ಟಾರೆ, ಅರಸು ಸಮುದಾಯವೇ ಗಣನೀಯವಾಗಿ ವಾಸಿಸುತ್ತಿರುವ ಗ್ರಾಮ ಹಲವು ವಿಶೇಷತೆಗಳನ್ನು ಒಡಲಾಳದಲ್ಲಿ ಇರಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net