

ಕೂಡ್ಲಿಗಿ: ಸೈನಿಕರ ತ್ಯಾಗ ಹಾಗೂ ನಿಸ್ವಾರ್ಥ ಸೇವೆಯಿಂದ ದೇಶದ ಜನರು ಶಾಂತಿ, ನೆಮ್ಮದಿಯಾಗಿರಲು ಸಾಧ್ಯ ಎಂದು ಅತಿಥಿ ಶಿಕ್ಷಕ ಭೀಮರೆಡ್ಡಿ ಹೇಳಿದರು.
ಚಂದ್ರಶೇಖರಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ಬಿಸಿಎಂ ನಿಲಯದಲ್ಲಿ ಭಗತ್ ಸಿಂಗ್ ಯುವಕ ಸಂಘ ಮತ್ತು ದಲಿತ ಯುವಕ ಸಂಘ ಬುಧವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಉದ್ದಗಲಕ್ಕೂ ಶತ್ರುಗಳ ಜತೆ ಹೋರಾಟ ಮಾಡಿ, ಹಗಲಿರುಳು ಗಡಿ ಕಾಯುವ ಹೊಣೆ ಸೈನಿಕರಿದ್ದಾಗಿದೆ. ನಮ್ಮ ನೆಮ್ಮದಿಗಾಗಿ ಪ್ರಾಣ ಮುಡಿಪಿಡುವ ಯೋಧರು ಆದರ್ಶವಾಗಿದ್ದು, ಅವರನ್ನು ಎಂದಿಗೂ ಮರೆಯಬಾರದು. ಗೌರವದಿಂದ ಕಾಣಬೇಕು ಎಂದರು.
ಇದನ್ನೂ ಓದಿ: ಕಾರ್ಗಿಲ್ ವಿಜಯೋತ್ಸವ ಸ್ವಾಭಿಮಾನದ ಸಂಕೇತ
ಭಗತ್ ಸಿಂಗ್ ಯುವಕ ಸಂಘದ ವಿ.ಲೋಕೇಶ್ ಮಾತನಾಡಿ, ದೇಶದ ಗಡಿ ಕಾಯುತ್ತಿರುವ ಸೈನಿಕರ ಸೇವೆಗೆ ಬೆಲೆ ಕಟ್ಟಲಾಗದು. ವಿದ್ಯಾರ್ಥಿಗಳು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಸೈನಿಕರ ಮೇಲೆಯೂ ಗೌರವ, ಅಭಿಮಾನ ಹೊಂದಬೇಕು ಎಂದರು. ವಸತಿ ನಿಲಯದ ಮೇಲ್ವಿಚಾರಕ ಕುಮಾರಸ್ವಾಮಿ, ಶಿಕ್ಷಣ ಪ್ರೇಮಿ ಕೊಟ್ರೇಶ್, ವಿ.ಲೋಕೇಶ್, ಡಿವೈಎಸ್ ಅಧ್ಯಕ್ಷ ಶಿವು, ಶಂಕರನಾಗ್, ಮಹಾಂತೇಶ್, ಬಸವರಾಜ್, ಸಂದೀಪ್, ನಾಗೇಶ್,ಬಸವೇಶ್, ರಾಜು, ಅಡುಗೆ ಸಿಬ್ಬಂದಿ ಚೌಡಮ್ಮ, ರಂಗಪ್ಪ ಇತರರಿದ್ದರು.