ಮೊಸಳೆ ಗಣತಿಗೆ ಕೆಟಿಆರ್ ನಿರ್ಧಾರ

8KWR2-Dandeli Korkodail
Published on

ಕಾರವಾರ: ದಾಂಡೇಲಿಯಲ್ಲಿ ಮೊಸಳೆಗಳಿಂದ ಮಾನವರ ಮೇಲೆ ದಾಳಿಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಅವುಗಳ ಗಣತಿ ನಡೆಸಲು ಕೆಟಿಆರ್ (ಕಾಳಿ ಸಂರಕ್ಷಿತ ಅಭಯಾರಣ್ಯ) ಆಡಳಿತ ನಿರ್ಧರಿಸಿದೆ. ಏಪ್ರಿಲ್ ಹೊತ್ತಿಗೆ ಈ ಕಾರ್ಯ ಪ್ರಾರಂಭವಾಗಲಿದ್ದು, ಮುಂದಿನ ಆರು ತಿಂಗಳಲ್ಲಿ ಮುಕ್ತಾಯವಾಗುವ ಸಾಧ್ಯತೆ ಇದೆ.
ಕಳೆದ ವರ್ಷ (2022) ದಾಂಡೇಲಿ ನಗರದಲ್ಲಿ 5 ಜನರು ಮೊಸಳೆಗಳ ದಾಳಿಗೆ ಬಲಿಯಾಗಿದ್ದಾರೆ. ಅವುಗಳ ಬಾಯಿಗೆ ಸಿಕ್ಕ ಜಾನುವಾರುಗಳ ಸಂಖ್ಯೆ ಲೆಕ್ಕಕ್ಕಿಲ್ಲ. ಮೊಸಳೆಗಳ ಸಂಖ್ಯೆ ಹೆಚ್ಚಿದೆ, ಅವುಗಳ ಆವಾಸ ಸ್ಥಾನ ಒತ್ತುವರಿಯಾಗಿದೆ. ಅವುಗಳಿಗೆ ಆಹಾರ ಸಿಗುತ್ತಿಲ್ಲ ಹೀಗೆ ವಿವಿಧ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಆದರೆ, ಇಷ್ಟು ವರ್ಷ ಇಲ್ಲದ ಈ ದಾಳಿಗಳು ಈಗ ಹೆಚ್ಚಲು ಕಾರಣವೇನು ಎಂಬುದನ್ನು ವೈಜ್ಞಾನಿಕವಾಗಿ ಅರಿಯಲು ಕಾಳಿ ಸಂರಕ್ಷಿತ ಅಭಯಾರಣ್ಯ ಆಡಳಿತ ಮುಂದಾಗಿದೆ.
ಕೆಟಿಆರ್​ನ ವನ್ಯಜೀವಿ ಅಧ್ಯಯನ ವಿಭಾಗದಿಂದಲೇ ಈ ಗಣತಿ ಹಾಗೂ ಅಧ್ಯಯನ ಕಾರ್ಯ ನಡೆಯಲಿದೆ. ಅನುಮತಿ ನೀಡುವಂತೆ ಈಗಾಗಲೇ ರಾಜ್ಯ ಮುಖ್ಯ ವನ್ಯಜೀವಿ ಸಂರಕ್ಷಕರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ನಂತರ ಕೆಲವು ತಜ್ಞರನ್ನು ಕರೆಸಿ ತರಬೇತಿ ನೀಡಿ ಈ ಕಾರ್ಯ ನಡೆಸಲಾಗುವುದು ಎಂದು ಕೆಟಿಆರ್ ನಿರ್ದೇಶಕರಾದ ಮಾರಿಯಾ ಕ್ರಿಸ್ತರಾಜು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಗಣತಿ ಹೇಗೆ..?: ದೋಣಿಯಲ್ಲಿ ತೆರಳಿ ವಿಶಿಷ್ಟ ಸ್ವರೂಪದ ಗನ್ ಮುಖಾಂತರ ಮೊಸಳೆಗಳ ಮೇಲೆ ಬಣ್ಣದ ಗುರುತು ಹಾಕಲಾಗುತ್ತದೆ. ನಂತರ ಇನ್ನೊಮ್ಮೆ ತೆರಳಿ ಅವುಗಳ ಲೆಕ್ಕ ಹಾಕಲಾಗುತ್ತದೆ. ಇದಕ್ಕೆ ವಿಶೇಷ ಪರಿಣತಿ ಅಗತ್ಯವಿದ್ದು, ತೀರ ಅಪಾಯಕಾರಿ ಕೆಲಸವೂ ಆಗಿದೆ. ಈ ಹಿಂದೆ ದೇಶದ ವಿವಿಧೆಡೆ ಅವುಗಳ ಸಂಖ್ಯೆ ಹಾಗೂ ಪ್ರವೃತ್ತಿಗಳ ಅಧ್ಯಯನ ನಡೆದಿದೆ. ಅದನ್ನು ಆಧರಿಸಿ ಅವುಗಳ ವರ್ತನೆಯ ಬಗ್ಗೆ ವಿಶ್ಲೇಷಣೆ ಮಾಡಬಹುದಾಗಿದೆ.

ದಾಂಡೇಲಿ ನಗರ ವ್ಯಾಪ್ತಿಯನ್ನು ಕೇಂದ್ರೀಕರಿಸಿ ನಾವು ಮೊಸಳೆಗಳ ಗಣತಿ ಮಾಡಲು ನಿರ್ಧರಿಸಿದ್ದೇವೆ. ನಂತರ ಅವುಗಳು ಮಾನವನ ಮೇಲೆ ದಾಳಿ ಮಾಡಲು ಕಾರಣಗಳೇನು..? ಅದಕ್ಕೆ ಪರಿಹಾರವೇನು ಎಂಬುದನ್ನು ವಿಶ್ಲೇಷಿಸಲು ಅನುಕೂಲವಾಗಲಿದೆ.| ಮಾರಿಯಾ ಕ್ರಿಸ್ತರಾಜು ಕೆಟಿಆರ್ ನಿರ್ದೇಶಕ


ವಿಪರೀತ ವರ್ತನೆಗೆ ಕಾರಣವೇನು..?
ಹಿಂದಿನಿಂದಲೂ ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆಗಳಿವೆ. ಆದರೆ, ಮಾನವರ ಮೇಲೆ ದಾಳಿ ಮಾಡಿದ ಪ್ರಕರಣಗಳು ಅಪರೂಪ. ನದಿಯ ದಡ ಬಿಟ್ಟು ಹೊರಗೆ ಓಡಾಡುವುದೂ ಅಪರೂಪವಾಗಿತ್ತು. ಇದೇ ಕಾರಣಕ್ಕೆ ದಾಂಡೇಲಿಯಲ್ಲಿ ಮೊಸಳೆ ಪಾರ್ಕ್ ಮಾತ್ರ ನಿರ್ಮಾಣ ಮಾಡಲಾಗಿದೆ. ಆದರೆ, ಕಳೆದ ಎರಡು-ಮೂರು ವರ್ಷಗಳಲ್ಲಿ ಅವು ದಡ ಬಿಟ್ಟು ಮೇಲೆ ಬರಲಾರಂಭಿಸಿವೆ. ಓಣಿಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ. ಈಗಾಗಲೇ ನದಿ ದಡದಲ್ಲಿ ಫೆನ್ಸಿಂಗ್ ಮಾಡುವ ಕಾರ್ಯಗಳಾಗುತ್ತಿದೆ. ಆದರೂ ಅವುಗಳ ನಿಯಂತ್ರಣ ಹೇಗೆ ಎಂಬುದು ಸ್ಥಳೀಯರಿಗೆ, ಇಲಾಖೆಗಳಿಗೆ ಸವಾಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net