ಮಕ್ಕಳ ಕಂಠಸಿರಿಯಲ್ಲಿ ಮೊಳಗಿದ ಕೆಎಸ್‌ನ ಗಾಯನ

27-kkr1(1-24
Published on

ಕಿಕ್ಕೇರಿ: ತವರಿನ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಹುಟ್ಟುಹಬ್ಬದ ನೆನಪಿನಲ್ಲಿ ಶನಿವಾರ ಪುಟಾಣಿ ಮಕ್ಕಳು ಮೈಸೂರು ಮಲ್ಲಿಗೆ ಕವಿಯ ಹತ್ತು ಹಲವು ಗೀತೆ ಹಾಡಿ ರಂಜಿಸಿದರು.


ಪಟ್ಟಣದಲ್ಲಿ ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಕೆ.ಎಸ್.ನರಸಿಂಹಸ್ವಾಮಿ ಜನ್ಮದಿನ ಕಾರ್ಯಕ್ರಮದಲ್ಲಿ ಮಕ್ಕಳು ಒಂದೆಡೆ ಸೇರಿ ಸುಶ್ರಾವ್ಯವಾಗಿ ಕವಿ ಗೀತೆ ಹಾಡಿ ಕರ್ಣಾನಂದ ಮಾಡಿದರು.


ಪ್ರೊ.ಶೇಷಾಚಲ ಹವಾಲ್ದಾರ್ ಮಾತನಾಡಿ, ಕಿಕ್ಕೇರಿ ಎಂದರೆ ನೆನಪು ಬರುವುದು ಕೆಎಸ್‌ನ. ಅವರ ಕವಿತೆಗೆ ಮನಸೋಲದವರಿಲ್ಲ. ಪ್ರೇಮಕಾವ್ಯ ಗಾರುಡಿಗರ ಹಾಡು ಇಡೀ ವಿಶ್ವಕ್ಕೆ ಚಿರಪರಿಚಿತವಾಗಿದೆ. ಅವರ ನೆನಪಿನಲ್ಲಿ ಸ್ಮಾರಕ, ವಸ್ತುಸಂಗ್ರಹಾಲಯ, ಉದ್ಯಾನದಂತಹ ಯೋಜನೆಗಳು ಕಾರ್ಯರೂಪವಾದಲ್ಲಿ ಯುವಕರಲ್ಲಿ ಕಾವ್ಯದ ಆಸಕ್ತಿ ಮೂಡಲಿದೆ. ಯುವಕವಿಗಳನ್ನು ಪ್ರೋತ್ಸಾಹಿಸುವ ಕೆಲಸವಾಗಲು ಮೊದಲು ಕೆಎಸ್‌ನ ನೆನಪು ಉಳಿಯುವಂತಹ ಕಾರ್ಯಕ್ರಮ ರೂಪಿತವಾಗಬೇಕು ಎಂದರು.


ಪುಟಾಣಿಗಳ ಕಂಠಸಿರಿಯಲ್ಲಿ ಮೂಡಿಬಂದ ನದಿಗಳ ಗಿರಿವನಗಳ ತಾಯೆ ಭರತಮಾತೆ, ಆಕಾಶಕ್ಕೆದ್ದು ನಿಂತ, ನಾವು ಭಾರತೀಯರು, ನಗುವಾಗ ನಕ್ಕು ಅಳುವಾಗ ಅತ್ತು, ಹತ್ತು ವರುಷದ ಹಿಂದೆ, ಸಿರಿಗೆರೆಯ ನೀರಲ್ಲಿ, ಒಂದಿರುಳು ಕನಸಿನಲಿ, ಬಳೆಗಾರ ಚೆನ್ನಯ್ಯ ಮತ್ತಿತರ ಗೀತೆಗಳು ಕಾವ್ಯ ರಸದೌತಣ ನೀಡಿತು.


ಒಲವಿನ ಕವಿ ಭಾವಚಿತ್ರಕ್ಕೆ ಪುಷ್ಪನಮನ, ಕಾವ್ಯ ನಮನದ ಮೂಲಕ ಗೌರವ ಅರ್ಪಿಸಲಾಯಿತು. ಗಾಯನ ಹಾಡಿದ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಮಹಾಲಕ್ಷ್ಮೀ, ಲೋಚನ್ ಕೃಷ್ಣ, ಪ್ರಥಮ್, ಪ್ರೀತಿ, ಶಾಂಭವಿ, ಪ್ರಖ್ಯಾತ, ಚಹನಾ, ಧನ್ವಿ, ಹರಿಚರಣ್, ಇಂಚರಾ, ತ್ರಿಷಾ, ರಾಮ್‌ಚರಣ್, ಅಭಿನವ ನಾವಡ ಮತ್ತಿತರರು ಕಾವ್ಯಗಾಯನದಿಂದ ಮನಗೆದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net