ಸಾರಿಗೆ ನೌಕರರ ನಿ"ಶಕ್ತಿ'ಗೊಳಿಸಿದ ಗ್ಯಾರಂಟಿ ಯೋಜನೆ

ksrtc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸಾರಿಗೆ ನೌಕರ ಕುರಿತು ಸರ್ಕಾರ ಉದಾಸೀನ ತೋರುತ್ತಿರುವುದು ನೋವಿನ ಸಂಗತಿ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮಾಜಿ ಉಪಾಧ್ಯಕ್ಷ ಡಾ.ಎಂ.ಆರ್​. ವೆಂಕಟೇಶ್​ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

"ಶಕ್ತಿ' ಯೋಜನೆಯನ್ನು ಮುನ್ನಡೆಸಲು ರಾಜ್ಯ ಸರ್ಕಾರದ ಅಧೀನದ ನಾಲ್ಕೂ ನಿಗಮದ ಅಧಿಕಾರಿಗಳು, ಸಿಬ್ಬಂದಿ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. "ಈ ಯೋಜನೆಯಿಂದ ಮಹಿಳೆಯರ ಜೀವನದಲ್ಲಿ ಧನಾತ್ಮಕ ಬದಲಾವಣೆಯಾಗಿದೆ, ಸ್ವಾವಲಂಬನೆಯತ್ತ ಹೆಜ್ಜೆಯನ್ನು ಇಟ್ಟಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಸಭೆ, ಸಮಾರಂಭಗಳಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ ಇಷ್ಟೆಲ್ಲ ಯೋಜನೆಯ ಸಫಲತೆಯ ಹಿಂದಿನ ಕೈಗಳು ಮಾತ್ರ ಕಷ್ಟ ಅನುಭವಿಸುತ್ತಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಜು. 4ರಂದು ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಭರವಸೆ ನೀಡಿ ಹಿಂಬಾಕಿ ಕುರಿತು ಮುಂದಿನ ವಾರ ಮತ್ತೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿ ಜು. 20 ಆದರೂ ಸಭೆ ಕರೆದಿಲ್ಲ. ಹೀಗಾಗಿ ಅನಿವಾರ್ಯವಾಗಿ ನೌಕರರು ಆ.5ರಿಂದ ಅರ್ನಿದಿಷ್ಟಾವಧಿಗೆ ಮುಷ್ಕರ ನಡೆಸುವ ಘೋಷಣೆ ಮಾಡಿದ್ದಾರೆ. ರಾಜ್ಯದ 4 ಸಾರಿಗೆ ನಿಗಮಗಳಲ್ಲಿ 1 ಲಕ್ಷಕ್ಕೂ ಹೆಚ್ಚು ನೌಕರರಿದ್ದಾರೆ. ಅಂದರೆ ನೇರವಾಗಿ ಸಾರಿಗೆ ಸಂಸ್ಥೆಯ ಮೇಲೆ 4 ಲಕ್ಷಕ್ಕೂ ಹೆಚ್ಚು ಜನರು ಅವಲಂಬಿತರಾಗಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸುವುದು ಸರ್ಕಾರದ ಬಾಧ್ಯತೆ ಎಂದಿದ್ದಾರೆ.

ಕೇಂದ್ರ ಸರ್ಕಾರದ ಯೋಜನೆಯಡಿ ಹೊಸ ಬಸ್ಸುಗಳನ್ನು ಖರೀದಿ ಮಾಡಿರುವುದು, ಸಾಲ ಎತ್ತುವಳಿ ಮಾಡಿರುವುದು ಬಿಟ್ಟರೆ ಸಾರಿಗೆ ನಿಗಮಗಳ ಪ್ರಾಮಾಣಿಕ ಪುನಶ್ಚೇತನಕ್ಕೆ ಈ ಸರ್ಕಾರ ಯಾವುದೇ ಪ್ರಾಮಾಣಿಕ ಪ್ರಯತ್ನಪಟ್ಟಿಲ್ಲ ಎಂಬುದು ನೌಕರರ ಅಳಲು ಎಂದು ಎಂ.ಆರ್​. ವೆಂಕಟೇಶ್​ ಉಲ್ಲೇಖಿಸಿದ್ದಾರೆ.

ವೇತನ ಪರಿಷ್ಕರಣೆ ಆಗಿಲ್ಲ

ಹಿಂದಿನ ಸರ್ಕಾರದ ಅವಧಿಯಲ್ಲಿ ತೀವ್ರವಾದ ಕರೊನಾ ಸಂಕಷ್ಟ ಎದುರಾದಾಗಲೂ ಸಾರಿಗೆ ನೌಕರರಿಗೆ ಯಾವುದೇ ತೊಂದರೆಯಾಗದಂತೆ ನಿಯಮಿತವಾಗಿ ಸಿಬ್ಬಂದಿಗೆ ಸಂಬಳವನ್ನು ನೀಡಿದೆ. ಕೋವಿಡ್​ ಸಂಕಷ್ಟಗಳ ಮಧ್ಯೆ ಹಿಂದಿನ ಸರ್ಕಾರ ವೇತನ ಪರಿಷ್ಕರಣೆ ಮಾಡಲು ಸಾಧ್ಯವಾಗಿಲ್ಲ ಎಂದು ಡಾ.ಎಂ.ಆರ್​. ವೆಂಕಟೇಶ್​ ಲೇವಡಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net