ವಿವಿ ಹೊಸ ಕ್ಯಾಂಪಸ್​ಗೆ ಸಾರಿಗೆ ಬಸ್​ ಸೇವೆ ಆರಂಭ

VV_Bus
Published on

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ನೂತನ "ಜ್ಞಾನಸಿರಿ' ಕ್ಯಾಂಪಸ್​ನಲ್ಲಿ ತರಗತಿಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಲು ಅನುಕೂಲವಾಗುವಂತೆ ಕೆಎಸ್​ಆರ್​ಟಿಸಿ ದೈನಂದಿನ ಬಸ್​ ಸಂಚಾರ ಆರಂಭಿಸಿದೆ. ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್​ಗೌಡ ಬುಧವಾರ ಚಾಲನೆ ನೀಡಿದರು.

ನಗರದ ವಿವಿ ಕ್ಯಾಂಪಸ್​ನಿಂದ ಬಸ್​ ಸಂಚಾರಕ್ಕೆ ಚಾಲನೆ ನೀಡಲು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್​ಜಮ್​, ತುಮಕೂರಿನ ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಕ ಎಸ್​.ಚಂದ್ರಶೇಖರ್​ ಇದ್ದರು.

ಅ.10 ರಂದು ವಿಶ್ವವಿದ್ಯಾನಿಲಯದ ಮೊದಲ ವರ್ಷದ ಸ್ನಾತಕೋತ್ತರ ವಿಜ್ಞಾನ ವಿಷಯಗಳಿಗೆ ಪ್ರವೇಶಾತಿ ನಡೆಯಲಿದ್ದು, ಅ.14 ರಿಂದ ಪ್ರಥಮ ವರ್ಷದ ಸ್ನಾತಕೋತ್ತರ ತರಗತಿಗಳು ಆರಂಭವಾಗಲಿವೆ. ಪ್ರವೇಶಾತಿ ಸಂಬಂಧ ಅ.10 ರಂದು ಹಾಗೂ ಅ.14ರಿಂದ ಪ್ರತಿನಿತ್ಯ ನೂತನ "ಜ್ಞಾನಸಿರಿ' ಕ್ಯಾಂಪಸ್​ಗೆ ತೆರಳಲು ಕೆಎಸ್​ಆರ್​ಟಿಸಿ ಬಸ್​ಗಳು ತುಮಕೂರು ನಗರ ಬಸ್​ ನಿಲ್ದಾಣದಿಂದ ಹಾಗೂ ತುಮಕೂರು ವಿವಿ ನಗರ ಕ್ಯಾಂಪಸ್​ನಿಂದ ಲಭ್ಯವಿರಲಿವೆ.

ಬಿದರಕಟ್ಟೆಯ ನೂತನ "ಜ್ಞಾನಸಿರಿ' ಕ್ಯಾಂಪಸ್​ ತುಮಕೂರು ನಗರದಿಂದ 18 ಕಿಮೀ ದೂರವಿದ್ದು ವಿವಿಯ ವಿದ್ಯಾರ್ಥಿಗಳು, ಅಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು ತುಮಕೂರು ನಗರದಿಂದ ಮತ್ತು ನಗರ ಕ್ಯಾಂಪಸ್​ನಿಂದ ಱಜ್ಞಾನಸಿರಿ ಕ್ಯಾಂಪಸ್​ಗೆ ತೆರಳಲು ಅನುವಾಗುವಂತೆ ಜ್ಞಾನಸಿರಿ ಕ್ಯಾಂಪಸ್​ ಮಾರ್ಗಕ್ಕೆ ಬಸ್​ಗಳ ಸಂಚಾರ ಸೌಲಭ್ಯ ಕಲ್ಪಿಸಲಾಗಿದೆ.

ತುಮಕೂರು-ಗೂಳೂರು-ಹೊನ್ನುಡಿಕೆ ಹ್ಯಾಂಡ್​ಪೋಸ್ಟ್​, ಸೋಪನಹಳ್ಳಿ ಗೇಟ್​-ಬಿದರಕಟ್ಟೆ ಮಾರ್ಗವಾಗಿ ಕೆಎಸ್​ಆರ್​ಟಿಸಿ ಬಸ್​ ಸಂಚರಿಸಿ ಜ್ಞಾನಸಿರಿ ಕ್ಯಾಂಪಸ್​ ತಲುಪಲಿದೆ.

ಅ.10ರಂದು ತುಮಕೂರು ನಗರ ಬಸ್​ ನಿಲ್ದಾಣದಿಂದ ಬೆಳಗ್ಗೆ 8, 9, 10, 11, ಮಧ್ಯಾಹ್ನ 2, 3, 4, 5, 6 ಗಂಟೆಯ ವರಗೆ ಹಾಗೂ ತುಮಕೂರು ವಿಶ್ವವಿದ್ಯಾಲಯದ ನಗರ ಕ್ಯಾಂಪಸ್​ನಿಂದ ಬೆಳಗ್ಗೆ 8.30, 9.30, 10.30, 11.30, ಮಧ್ಯಾಹ್ನ 2.30, 3.30, 4.30, 5.30, 6.30ರ ವರೆಗೂ ತುಮಕೂರು ವಿವಿಯ "ಜ್ಞಾನಸಿರಿ' ಕ್ಯಾಂಪಸ್​ಗೆ ತೆರಳಲು ಬಸ್​ಗಳು ಲಭ್ಯವಿರಲಿವೆ.

ಅ.14 ರಿಂದ ಪ್ರತಿನಿತ್ಯ ತುಮಕೂರು ನಗರ ಬಸ್​ ನಿಲ್ದಾಣದಿಂದ ಬೆಳಗ್ಗೆ 8, 9, 10, 11, ಮಧ್ಯಾಹ್ನ 12, 1, 2, 3, 4, 5, 6 ಗಂಟೆಯವರೆಗೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ನಗರ ಕ್ಯಾಂಪಸ್​ನಿಂದ ಬೆಳಗ್ಗೆ 8.30, 9.30, 10.30, 11.30, ಮಧ್ಯಾಹ್ನ 12.30, 1.30, 2.30, 3.30, 4.30, 5.30, 6.30ರ ವರೆಗೂ ತುಮಕೂರು ವಿವಿಯ ಱಜ್ಞಾನಸಿರಿ ಕ್ಯಾಂಪಸ್​ಗೆ ತೆರಳಲು ಬಸ್​ಗಳು ಲಭ್ಯವಿರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net