

ವಿಜಯವಾಣಿ ಸುದ್ದಿಜಾಲ ಕಡಬ
ನಮ್ಮ ಸರ್ಕಾರ ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಇದೀಗ ಎರಡು ರೂಟ್ಗಳಿಗೆ ಬಸ್ ನೀಡುವ ಮೂಲಕ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆಲಂಕಾರಿನಲ್ಲಿ ಆಲಂಕಾರು ಮಾದೇರಿ - ನೆಲ್ಯಾಡಿ ಹಾಗೂ ಉಪ್ಪಿನಂಗಡಿ - ಕಡಬ ಮಣಿಭಾಂಡ ಮಾರ್ಗಕ್ಕೆ ನೂತನವಾಗಿ ಪ್ರಾರಂಭವಾದ ಕೆಎಸ್ಆರ್ಟಿಸಿ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಈಗಾಗಲೇ ಕ್ಷೇತ್ರದ ನಾಲ್ಕು ಕಡೆ ಹೆಚ್ಚುವರಿ ಬಸ್ಗಳನ್ನು ಕೊಡಲಾಗಿದೆ. ಇನ್ನು ಕೆಲವು ಬಸ್ಗಳ ಅವಶ್ಯಕತೆಯಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಲ್ಲಿ ಮನವಿ ಮಾಡಿದ್ದೇನೆ ಎಂದರು.
ನಂತರ ಸಚಿವ ದಿನೇಶ್ ಗುಂಡೂರಾವ್ ಮತ್ತು ಶಾಸಕರು ಮತ್ತು ಪ್ರಮುಖರು ಜತೆಯಲ್ಲಿ ನಿಂತು ಹಸಿರು ನಿಶಾನೆ ತೋರಿದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಕೆಪಿಸಿಸಿ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಜಿ.ಕೃಷ್ಣಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಡಬ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ಪ್ರಮುಖರಾದ ವಿಜಯ ಕುಮಾರ್ ಸೊರಕೆ, ಡಾ.ರು, ವಿನಯರಾಜ್, ಸತೀಶ್ ಕೆಡೆಂಜಿ, ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂ ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ, ಪೆರಾಬೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ, ಬಿಜೆಪಿ ಮುಖಂಡರಾದ ಪ್ರದೀಪ್ ರೈ ಮನವಳಿಕೆ, ರವಿಪ್ರಸಾದ್ ಶೆಟ್ಟಿ, ಪೂವಪ್ಪ ನಾಯ್ಕ ಶಾಂತಿಗುರಿ, ಕಡಬ ತಹಸೀಲ್ದಾರರಾದ ಪ್ರಭಾಕರ ಖಜೂರೆ, ಕಂದಾಯ ನಿರೀಕ್ಷಕ ಪೃಥ್ವಿರಾಜ್, ಕೆಎಸ್ಆರ್ಟಿಸಿ ಅಧಿಕಾರಿಗಳಾದ ಜೈಶಂಕರ್, ಸುಬ್ರಹ್ಮಣ್ಯ ಪ್ರಕಾಶ್, ನಿವೃತ್ತ ಅಧಿಕಾರಿ ಅಬ್ಬಾಸ್ ಕುಂತೂರು ಮೊದಲಾದವರಿದ್ದರು.
ಅಭಿವೃದ್ಧಿಯಲ್ಲಿ ರಾಜಕೀಯ ಬೇಡ
ಬಸ್ಸಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಈ ವೇಳೆ ನಮ್ಮ ಪ್ರಯತ್ನದಿಂದ ಬಸ್ ಬಂದಿದೆ ಎನ್ನುವ ವಿಚಾರ ಕಾಂಗ್ರೆಸ್ ಕಡೆಯಿಂದ ಪ್ರಸ್ತಾಪವಾದಾಗ ಶಾಸಕಿ ಭಾಗೀರಥಿ ಮುರುಳ್ಯ ಆಕ್ಷೇಪ ವ್ಯಕ್ತಪಡಿಸಿ ಇಲ್ಲಿ ರಾಜಕೀಯ ಬೇಡ ಎಂದು ಜೋರಾಗಿಯೇ ಹೇಳಿದರು. ನಾನು ಕೂಡಾ ಬಸ್ಗಾಗಿ ಸಚಿವರಲ್ಲಿ ಮನವಿ ಮಾಡಿದ್ದೇನೆ. ಕೆಡಿಪಿ ಮೀಟಿಂಗ್ನಲ್ಲಿ ಕೂಡ ಪ್ರಸ್ತಾಪಿಸಿ ಆಗ್ರಹಿಸಿದ್ದೇನೆ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶಾಸಕರ ಪ್ರಯತ್ನವೂ ಇದೆ ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದರು.