ರಾಮನಗರ : ತಾಲೂಕಿನ ಮಾಗಡಿ ರಸ್ತೆ, ತಿಮ್ಮಸಂದ್ರ ಗೇಟ್ ಬಳಿ ಕೆಎಸ್ಆರ್ಟಿಸಿ ದ್ವಿಚಕ್ರ ವಾಹನ ಡಿಕ್ಕಿಯಾಗಿ ಆರೋಗ್ಯ ಇಲಾಖೆ ನೌಕರ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಸಂಜಯ್ (40) ಮೃತಪಟ್ಟ ದುರ್ದೈವಇ. ಮಾಗಡಿ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಪ್ರಯೋಗಶಾಲಾ ತಂತ್ರಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದು ಸಂಜಯ್ ರಾಮನಗರ ಐಜೂರಿನಲ್ಲಿ ವಾಸವಾಗಿದ್ದರು. ಒಂದು ಮಗು ಇದ್ದು, ಪತ್ನಿ ಕೂಡ ರಾಮನಗರದ ರಾಯರದೊಡ್ಡಿ ನಗರ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಶಾಲಾ ತಂತ್ರಜ್ಞರಾಗಿದ್ದಾರೆ. ಸಂಜಯ್ ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನವರು.
ಕೆಲಸ ಮುಗಿಸಿ ರಾಮನಗರಕ್ಕೆ ಬರುವಾಗ ಮಾಗಡಿ ರಸ್ತೆ ತಿಮ್ಮಸಂದ್ರ ಗೇಟ್ ಬಳಿಯ ವಿದ್ಯುತ್ ಪ್ರಸರಣ ಉಪ ಕೇಂದ್ರದ ಮುಂಭಾಗ ರಾಮನಗರದಿಂದ ಮಾಗಡಿ ಕಡೆಗೆ ಫಿಟ್ನೆಸ್ ಷರ್ಟಿಫಿಕೇಟ್ ಮಾಡಿಸಿಕೊಂಡು ಹೋಗುತ್ತಿದ್ದ ಜನರಿರದ ಖಾಲಿ ಕೆಎಸ್ಆರ್ಟಿಸಿ ಬಸ್ ಮಾಗಡಿ ಕಡೆಯಿಂದ ಬರುತ್ತಿದ್ದ ಸಂಜಯ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿಯಿಂದ ಸಂಜಯ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ರಾಮನಗರ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ರಮೇಶ್, ಸಬ್ಇನ್ಸ್ಪೆಕ್ಟರ್ ಜಾರ್ಜ್ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಜಿಲ್ಲೆಯ ವೈಧ್ಯಕೀಯ ವರ್ಗ ಸಂಜಯ್ ಅವರ ಅಕಾಲಿಕ ಮರಣಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದೆ.