ಬೆಳ್ತಂಗಡಿ: ತಾಲೂಕಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್ಎಸ್) ಅಸ್ತಿತ್ವಕ್ಕೆ ಬಂದಿದ್ದು, ಪಕ್ಷವು ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ, ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣದ ಗುರಿ ಹೊಂದಿದೆ ಎಂದು ಕೆಆರ್ಎಸ್ ಪಕ್ಷದ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2016ರಲ್ಲಿ ಕೃಷ್ಣರೆಡ್ಡಿ ನೇತೃತ್ವದಲ್ಲಿ ಪಕ್ಷ ಸ್ಥಾಪನೆಯಾಗಿದ್ದು, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮೂಲಕ ರಾಜ್ಯದ ನೂರಾರು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿಮೂರ್ಲನೆ ಮಾಡುವ ನಿಟ್ಟಿನಲ್ಲಿ ಅಭಿಯಾನ ನಡೆಸುತ್ತಿದೆ. ಬಂಟ್ವಾಳ ಜಂಕ್ಷನ್ನಲ್ಲಿ ನಮ್ಮ ಪಕ್ಷದ ಜಿಲ್ಲಾ ಕಚೇರಿ ಇದ್ದು, ಸರ್ಕಾರಿ ಕಚೇರಿಗಳಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ಸಾರ್ವಜನಿಕರು ನಮ್ಮ ಗಮನಕ್ಕೆ ತರಬಹುದು. ಪತ್ರಿಕೆ ಅಥವಾ ಮಾಧ್ಯಮದ ಮೂಲಕ ನಮ್ಮ ಗಮನಕ್ಕೆ ಬಂದರೆ, ನಾವಾಗಿಯೇ ಖುದ್ದು ಬಂದು ಅವರಿಗೆ ಕೆಲಸ ಮಾಡಿಸಿಕೊಡುತ್ತೇವೆ. ಬೆಳ್ತಂಗಡಿ ತಾಲೂಕಿನಲ್ಲಿ ಈಗ ಪಕ್ಷ ಆಸ್ತಿತ್ವಕ್ಕೆ ಬಂದಿದ್ದು, ಮುಂದೆ ತಾಲೂಕಿನಲ್ಲಿ ಪಕ್ಷದ ಕಚೇರಿ ಆರಂಭವಾಗಲಿದೆ ಎಂದರು.
ಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಹೈದರಾಲಿ, ಪ್ರಧಾನ ಕಾರ್ಯದರ್ಶಿ ರಫೀಕ್ ಉಪ್ಪಿನಂಗಡಿ, ಕಾರ್ಯದರ್ಶಿಗಳಾದ ಅಶ್ರಫ್ ಜಾರಿಗೆಬೈಲ್, ರಮೀಝ್, ನಝೀರ್, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸಲೀಂ ಜಾರಿಗೆಬೈಲ್, ಶುಕ್ರು ಜಾರಿಗೆಬೈಲ್, ಜಿಲ್ಲಾ ಸಮಿತಿಯ ಅನೀಸ್ ಉಪಸ್ಥಿತರಿದ್ದರು.