

ಕೆ.ಆರ್.ಸಾಗರ: ಕೆ.ಆರ್.ಸಾಗರ ಅಣೆಕಟ್ಟೆಯ ಉತ್ತರ ಭಾಗ ಸಮೀಪದ ಹಿನ್ನೀರಿನ ನದಿ ಪಾತ್ರಕ್ಕೆ ಅಕ್ರಮವಾಗಿ ತಡೆಗೋಡೆ ಕಟ್ಟಲು ತೋಡಿದ್ದ ಸುಮಾರು 100 ಮೀಟರ್ ಗುಂಡಿಯನ್ನು ಕೆ.ಆರ್.ಸಾಗರದ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಬುಧವಾರ ಸಂಜೆ ಮುಚ್ಚಿಸಿದರು.
ಅಣೆಕಟ್ಟೆಯ ಉತ್ತರ ಭಾಗದಲ್ಲಿನ ಸರ್ವೇ ನಂ.220ರ ಮಾಲೀಕ ಮ್ಯಾಥ್ಯು ಎಂಬುವವರು ಹಿನ್ನೀರಿನ ಪಾತ್ರ ಸರ್ವೇ ಮಾಡಿಸಿದಾಗ ತನಗೆ ಸೇರಿದೆ ಎಂದು ಸುಮಾರು 30 ಅಡಿ ಉದ್ದ 100 ಅಡಿ ಅಗಲದಷ್ಟು ಪ್ರದೇಶವನ್ನು ಅತಿಕ್ರಮಿಸಿ ಗುಂಡಿ ತೋಡಿ ಕಲ್ಲುಗಳನ್ನು ಹಾಕಿ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಕಾರ್ಯಪಾಲಕ ಇಂಜಿನಿಯರ್ ಜಯಂತ್ ಕಾಮಗಾರಿ ಮಾಡದಂತೆ ಸೂಚಿಸಿ, ಸರ್ವೇ ನಡೆಸುವ ತನಕ ಕಾನೂನು ಮೀರಿ ಕೆಲಸ ಮಾಡಿದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಕುರಿತು ಜೂ.26ರಂದು ‘ವಿಜಯವಾಣಿ’ ವರದಿ ಪ್ರಕಟಿಸಿತ್ತು.
ವರದಿ ಗಮನಿಸಿದ ನೀರಾವರಿ ನಿಗಮದ ಸುದ್ದಿ ವ್ಯವಸ್ಥಾಪಕ ನಿರ್ದೇಶಕರು, ಹಿರಿಯ ಅಧಿಕಾರಿಗಳು ಮಾಹಿತಿ ಪಡೆದು ತಕ್ಷಣ ಕ್ರಮ ತೆಗೆದುಕೊಂಡು ಗುಂಡಿ ಮುಚ್ಚಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂಜಿನಿಯರ್ ಸುರೇಶ್‌ಬಾಬು ನೇತೃತ್ವದಲ್ಲಿ ಗುಂಡಿಯನ್ನು ಜೆಸಿಬಿ ಮೂಲಕ ಮುಚ್ಚಿಸಲಾಯಿತು.