

ಹೊನ್ನಾಳಿ: ಕೃಷ್ಣ ಮಾಸಡಿ ಅವರು ಬುದ್ಧ, ಬಸವ, ಗಾಂಧಿ, ಲೋಹಿ ಅವರ ಪ್ರಗತಿಪರ ವಿಚಾರಗಳಿಂದ ಪ್ರಭಾವಿತರಾಗಿ ಕಥೆ, ಕಾದಂಬರಿಗಳನ್ನು ಬರೆದಿದ್ದಾರೆ ಎಂದು ಕನ್ನಡ ಉಪನ್ಯಾಸಕ ಮಂಜುನಾಥ್ ಗೊಲ್ಲರಹಳ್ಳಿ ಹೇಳಿದರು.
ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಅನಿಮಿಷ ಪ್ರಕಾಶನ ಹಾಗೂ ನಾದನದಿ ಸಂಸ್ಥೆಯಿಂದ ಕೃಷ್ಣ ಮಾಗಡಿಗೆ ಫಲ್ಗು ಕಥಾ ಪ್ರಶಸ್ತಿ ಹಾಗೂ ಧಾರಿಣಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಕೃಷ್ಣ ಮಾಸಡಿ ಅವರು ಕಥೆ, ಕಾದಂಬರಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ, ಲಂಕೇಶ್ ಅವರೊಡಗೂಡಿ ಕೆಲಕಾಲ ಪತ್ರಿಕೆಯನ್ನು ನಡೆಸಿದವರು. ನಂತರ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಅವರು ಡಾ.ಯು.ಆರ್. ಅನಂತಮೂರ್ತಿ ಅವರ ಅವಸ್ಥೆ ಕಾದಂಬರಿಯನ್ನು 1987ರಲ್ಲಿ ನಿರ್ದೇಶಿಸಿದರು ಎಂದರು.
ಎಸ್. ನಿಜಲಿಂಗಪ್ಪ, ಡಿ. ದೇವರಾಜ ಅರಸ್, ಪು.ತಿನ. ರಾಷ್ಟ್ರಕವಿ ಜಿಎಸ್‌ಎಸ್, ಮಹಾಕವಿ ಪಂಪ, ಅನಂತಮೂರ್ತಿ, ವೀರೇಂದ್ರ ಹೆಗ್ಗಡೆ, ಎಸ್.ಜಿ. ಸಿದ್ದರಾಮಯ್ಯ ಇತ್ಯಾದಿ ಪ್ರಶಸ್ತಿಗಳಿಗೆ ಭಾಜನರಾದ ಇವರಿಗೆ ಖ್ಯಾತ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅವರು ಫಲ್ಗು ಕಥಾ ಪ್ರಶಸ್ತಿಗೆ ಆಯ್ಕೆಮಾಡಿ ಪ್ರದಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೈದ್ಯ ರಾಜ್‌ಕುಮಾರ್ ಮಾತನಾಡಿ, ನಮ್ಮ ನೆಲದಲ್ಲಿ ಹುಟ್ಟಿದ ಕೃಷ್ಣ ಮಾಸಡಿ ಅವರನ್ನು ಗುರುತಿಸಿ ಅನಿಮಿಷ ಪ್ರಕಾಶನ, ನಾದನದಿ ಸಂಸ್ಥೆ ಒಂದು ಉತ್ತಮ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಷಯವಾಗಿದೆ ಎಂದರು.
ಫಲ್ಗು ಕಥಾ ಪ್ರಶಸ್ತಿ ಸ್ವೀಕರಿಸಿದ ಕೃಷ್ಣ ಮಾಸಡಿ ಮಾತನಾಡಿ, ತಾಲೂಕಿನ ಮಾಸಡಿ ಗ್ರಾಮದಲ್ಲಿ ಜನಿಸಿದ ತಾವು ಗ್ರಾಮಗಳಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಕಥೆ, ಕಾದಂಬರಿಗಳಲ್ಲಿ ದಾಖಲಿಸುತ್ತಾ ಹೋದ ನೆನಪನ್ನು ಹಂಚಿಕೊಂಡರು. ನಾಟಕ, ಧಾರಾವಾಹಿ, ಸಿನಿಮಾಗಳತ್ತ ಆಸಕ್ತಿ ಬೆಳೆಸಿಕೊಂಡು ಅಲ್ಪ ಸೇವೆಯನ್ನು ಈ ನಾಡಿಗೆ ಸಲ್ಲಿಸಿದ್ದೇನೆ. ಜೇನುಗೂಡು ಹಾಗೂ ಭಾರತೀಪುರ ಧಾರವಾಹಿಗಳು ದಾಖಲೆ ಮಾಡಿದ್ದು ಅದು ಖುಷಿ ಕೊಟ್ಟಿದೆ ಎಂದರು.
ಖ್ಯಾತ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ, ಅಂತಃಕರಣ, ಡಾ. ಸ್ಫೂರ್ತಿರಾವ್, ಚಂದನಾ ಭರತ್, ಪ್ರೇಮ್‌ಕುಮಾರ್ ಬಂಡಿಗಡಿ, ಡಾ. ಕೊಟ್ರೇಶ್ ಉತ್ತಂಗಿ, ಶಕುಂತಲಾ ರಾಜಕುಮಾರ್, ಹೊನ್ನಾಳಿ ಚಂದ್ರಶೇಖರ್, ನಾಗರಾಜಪ್ಪ ಕುಂಬಾರ್, ನಿವೃತ್ತ ಉಪನ್ಯಾಸಕ ಬಸವರಾಜಪ್ಪ ಸೇರಿ ಅನೇಕ ಗಣ್ಯರು ಭಾಗಿಯಾಗಿದ್ದರು.