

ಶಿರಸಿ:ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಿ, ಯುವಕರನ್ನು ಸೆಲೆಯುವ ಉದ್ದೇಶದೊಂದಿಗೆ 16 ವರ್ಷಗಳಿಂದ ನಡೆಸಿಕೊಂಡು ಬರಲಾದ ಕೃಷಿ ಜಯಂತಿ ಮೇ 21ಮತ್ತು 22ರಂದು ಎರಡು ದಿನಗಳ ಕಾಲ ಸ್ವರ್ಣವಲ್ಲೀಯಲ್ಲಿ ನಡೆಯಲಿದೆ.
ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯುಲ್ಲಿ ಮಾಹಿತಿ ನೀಡಿ, ಮೇ 21 ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ಶ್ರೀ ಆನಂದಭೋದೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಮಹಾಸ್ವಾಮಿಗಳು ಕೃಷಿ ಜಯಂತಿ ಯನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಸ್ಯಲೋಕದ ಸಂಚಾಲಕ ಅನಂತ ಹೆಗಡೆ ಅಶೀಸರ, ಬಾಗಲಕೋಟದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ಹೆಗಡೆ, ಬೆಂಗಳೂರು ಜೀವ ವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ ಜಗತ್ ರಾಮ್, ಅರಣ್ಯ ಮಹಾವಿದ್ಯಾಲಯದ ಡೀನ್ ಆರ್.ವಾಸುದೇವ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ದೇವರ ಕಾಡು ನಾಮಫಲಕ ಅನಾವರಣ ಹಾಗೂ ಸ್ವರ್ಣವಲ್ಲೀ ಪ್ರಭಾ ಕೃಷಿ ವಿಶೇಷಾಂಕ ಬಿಡುಗಡೆ ಮತ್ತು ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿ ಪ್ರದಾನ ಕಾರ್ಯ ಜರುಗಲಿದೆ ಎಂದರು.
ಗೋಷ್ಠಿಗಳು:
ಮೇ 21ರ ಸಂಜೆ 4 ಗಂಟೆಗೆ ಬಾಗಲಕೋಟ ತೋಟಗಾರಿಕೆ ವಿ.ವಿಯ ವಿಸ್ತರಣಾ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಹೆಗಡೆ ಅಧ್ಯಕ್ಷತೆಯಲ್ಲಿ "ಮಲೆನಾಡಿನ ಕೃಷಿಯಲ್ಲಿ ಭವಿಷ್ಯದ ಸವಾಲುಗಳು" ಎಂಬ ವಿಷಯದ ಕುರಿತು ಸಿಂಜೆಂಟಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಡಾ. ಸತೀಶ ಹೆಗಡೆ ಹುಳಗೋಳ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಲಿದ್ದಾರೆ. ಸುಜಯ ಭಟ್ಟ ಹೊಸಳ್ಳಿ ಹಾಗೂ ಚಿನ್ಮಯ್ ಹೆಗಡೆ ಬೊಮ್ಮನಳ್ಳಿ ಯುವ ಕೃಷಿಕರ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಟಿಎಸ್‌ಎಸ್ ಕೃಷಿ ಗ್ರಾಮ ಯೋಜನೆ ಮಾಹಿತಿ ನೀಡಲಾಗುತ್ತದೆ. ಮೇ 22ರ ಬೆಳಗ್ಗೆ 10.30ಕ್ಕೆ ಶ್ರೀ ಮಠದ ತೋಟ ಮತ್ತು ಗೋ ಶಾಲೆಯನ್ನು ವೀಕ್ಷಣೆ ಹಾಗೂ ತೋಟಗಾರಿಕೆ ಹಾಗೂ ಹೈನುಗಾರಿಕೆ ಕುರಿತು ಯುವ ಕೃಷಿಕರಿಗೆ ವಿಶೇಷ ಮಾಹಿತಿನೀಡಲಾಗುತ್ತದೆ. ಕೃಷಿ ತಜ್ಞರಾದ ಲಿಂಗನಮಕ್ಕಿಯ ಡಾ.ಶ್ರೀಕಾಂತ ರಾವ್ ಮೊಹರೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಶಿರಸಿಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಸುರೇಶ ಹಕ್ಕಿಮನೆ, ಸದಸ್ಯ ಎಸ್.ಎಲ್.ತ್ಯಾಗಲಿ, ಸಚ್ಚಿದಾನಂದ ಹೆಗಡೆ, ರವೀಂದ್ರ ಹೆಗಡೆ, ರತ್ನಾಕರ ಬಾಡಲಕೊಪ್ಪ, ಶ್ರೀಧರ ಗುಡ್ಡೆಮನೆ ಇತರರು ಇದ್ದರು.