ನ.4ರಿಂದ ಕೆಪಿಎಸ್ ಶೈಕ್ಷಣಿಕ ಹಬ್ಬ-2024

Published on

ಬೆಳ್ತಂಗಡಿ: ಪುಂಜಾಲಕಟ್ಟೆ ಕುಕ್ಕಳ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ವಿಭಾಗ, ಪ್ರಾಥಮಿಕ ಮತ್ತು ಕಾಲೇಜಿನ ನೇತೃತ್ವದಲ್ಲಿ, ಊರವರು ಹಾಗೂ ದಾನಿಗಳ ಸಹಕಾರದೊಂದಿಗೆ ‘ಕೆಪಿಎಸ್ ಶೈಕ್ಷಣಿಕ ಹಬ್ಬ- 2024’ ನಡೆಯಲಿದೆ. 5,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಭಾನುವಾರ ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.4 ಮತ್ತು 5ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಮಡಂತ್ಯಾರಿನ ವತಿಯಿಂದ ರೋವರ್-ರೇಂಜರ್ಸ್ ಸಮಾಗಮ, ಸ್ಕೌಟ್ಸ್-ಗೈಡ್ಸ್ ರಾಲಿ, ಕಬ್ಸ್, ಬುಲ್-ಬುಲ್ ಉತ್ಸವ ನಡೆಯಲಿದೆ ಎಂದರು.

ನ.6ರಂದು ಬೆಳ್ತಂಗಡಿ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ನಡೆಯಲಿದ್ದು, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ವಿಭಾಗದಲ್ಲಿ ಸೇರಿ 48 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ನ.7ರಂದು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಸಂಪನ್ನಗೊಳ್ಳಲಿದೆ ಎಂದರು.

ನ.8ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ತಾಲೂಕುಮಟ್ಟದ ಭಾಷಣ, ಪ್ರಬಂಧ, ಚಿತ್ರಕಲೆ ಹಾಗೂ ಬದುಕು-ಬೆಳಕು ಎನ್ನುವ ಪುಸ್ತಕ ಆಧಾರಿತ ಕಂಠಪಾಠ ಸ್ಪರ್ಧೆ ನಡೆಯಲಿದೆ.ನ.9ರಂದು ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಸಂಪನ್ನಗೊಳ್ಳಲಿದೆ. ಸಂಸದರು, ಶಾಸಕರು, ತಾಲೂಕಿನ ಜನಪ್ರತಿನಿಧಿಗಳು, ದಾನಿಗಳು, ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಕಂಗಿತ್ತಿಲು, ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಬಿ., ಕೋಶಾಧಿಕಾರಿ ಮೋಹನ್ ಸಾಲಿಯಾನ್, ಪ್ರಭಾರ ಬಿಇಒ ವೆಂಕಟೇಶ ತುಳುಪುಳೆ, ಶಿಕ್ಷಣ ಇಲಾಖೆಯ ಕರುಣಾಕರ, ಚೇತನಾಕ್ಷಿ, ಶಿಕ್ಷಕ ಧರಣೇಂದ್ರ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net