ಜಿಲ್ಲೆಯಲ್ಲಿ ವಿದ್ಯುತ್‌ ಉತ್ಪಾದನೆ ಮಾಡಿ ಮಾರಾಟ ಮಾಡುವ ಕೆಪಿಸಿ ಇಲ್ಲಿಕೆ ಕೊಟ್ಟಿದ್ದು ಚೊಂಬು!!

Kadra-Power-house
Published on

ಕಾರವಾರ: ಜಿಲ್ಲೆಯ ನೆಲ, ಜಲ ಬಳಸಿ ವಿದ್ಯುತ್ ಉತ್ಪಾದನೆ ಮಾಡಿ ಮಾರಾಟ ಮಾಡಿ, ಕೋಟ್ಯಂತರ ರೂ. ಲಾಭ ಮಾಡುತ್ತಿರುವ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿಎಲ್)ವು ಇಲ್ಲಿನ ಜನರಿಗಾಗಿ ನಯಾ ಪೈಸೆ ಖರ್ಚು ಮಾಡದೇ ಇರುವ ವಿಚಾರ ಬಹಿರಂಗವಾಗಿದೆ.
ಕೆಪಿಸಿಯು ಕಳೆದ ಮೂರು ವರ್ಷಗಳಲ್ಲಿ ತನ್ನ ಸಾಮಾಜಿಕ ಜವಾಬ್ದಾರಿ ನಿಧಿ(ಸಿಎಸ್‌ಆರ್‌)ಯ ಅಲ್ಪ ಹಣವನ್ನೂ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಬಳಸಿಲ್ಲ ಎಂಬ ಸಂಗತಿ ಬಹಿರಂಗವಾಗಿದೆ. ಜಿಲ್ಲೆಯ ಅಚ್ಯುತಕುಮಾರ್ ಎಂಬುವವರು ಮಾಹಿತಿ ಹಕ್ಕಿನಡಿ ಸಲ್ಲಿಸಿದ ಅರ್ಜಿಗೆ ಸ್ವತಃ ಕರ್ನಾಟಕ ವಿದ್ಯುತ್ ನಿಗಮವೇ ಈ ಮಾಹಿತಿ ನೀಡಿದೆ.
ಕನಿಷ್ಠ 5 ಕೋಟಿ ರೂ. ಲಾಭ ಗಳಿಸುವ ಪ್ರತಿ ಕಂಪನಿಯೂ ತನ್ನ ನಿವ್ವಳ ಲಾಭದ ಶೇ.2 ರಷ್ಟನ್ನು ಸಾಮಾಜಿಕ ಕಾರ್ಯಕ್ಕೆ ಬಳಸಬೇಕು ಎಂದು ಉದ್ದಿಮೆಗಳ ಸಾರ್ವಜನಿಕ ಜವಾಬ್ದಾರಿ ಕಾಯ್ದೆ -2013 ಹೇಳುತ್ತದೆ. ಇದು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೂ ಅನ್ವಯವಾಗುತ್ತದೆ. ಕೆಪಿಸಿ ಕೂಡ ರಾಜ್ಯ ಸರ್ಕಾರಿ ಸ್ವಾಮ್ಯದ ಒಂದು ಉದ್ಯಮವಾಗಿದ್ದು, ತನ್ನ ಲಾಭದ ಹಣವನ್ನು ಸಿಎಸ್‌ಆರ್ ಆಗಿ ಬಳಸುತ್ತದೆ. ಆದರೆ, ವಿಪರ್ಯಾಸವೆಂದರೆ ಎಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತದೆಯೋ ಅಲ್ಲಿನ ಜನರ ಲಾಭಕ್ಕೆ ಹಣ ವಿನಿಯೋಗ ಮಾಡದೇ ಇರುವುದು ಮಾತ್ರ ದುರಂತ. ಆದರೆ, ಈ ನಿರ್ಲಕ್ಷ್ಯವೇಕೆ ಎಂದು ಕೆಪಿಸಿ ಅಧಿಕಾರಿಗಳನ್ನು ಕೇಳಲು ಹೋದರೆ, ಜಿಲ್ಲೆಯ ಯೋಜನೆಗಳ ಮುಖ್ಯಸ್ಥರು `ನಾವು ಮಾಧ್ಯಮಗಳಿಗೆ ಮಾಹಿತಿ ನೀಡಲು ಅಧಿಕಾರ ಹೊಂದಿಲ್ಲ'. ಬೆಂಗಳೂರಿಗೆ ಕೇಳಿಕೊಳ್ಳಿ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡರು.

ಉತ್ತರ ಕನ್ನಡದಲ್ಲೇ ಉತ್ಪಾದನೆ:

ಕರ್ನಾಟಕ ವಿದ್ಯುತ್ ನಿಗಮದ 2022-23 ರ ವಾರ್ಷಿಕ ವರದಿಯಂತೆ ಆ ವರ್ಷದಲ್ಲಿ 31,419 ದಶ ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿ ಮಾರಾಟ ಮಾಡಿದ್ದು, ಅದರಿಂದ 9,326 ಕೋಟಿ ರೂ.ಗಳಷ್ಟು ಆದಾಯ ಬಂದಿದೆ. ಖರ್ಚುಗಳೆಲ್ಲ ಸೇರಿ, ಸರ್ಕಾರಕ್ಕೆ ತೆರಿಗಳನ್ನೂ ತುಂಬಿ ಸುಮಾರು 191 ಕೋಟಿ ರೂ. ಲಾಭ ಗಳಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಪಿಸಿ ಕಾಳಿ ನದಿಗೆ ಸೂಪಾ, ಕೊಡಸಳ್ಳಿ, ಕದ್ರಾ, ಬೊಮ್ಮನಗಳ್ಳಿ, ತಟ್ಟಿಹಳ್ಳ, ಶರಾವತಿ ನದಿಗೆ ಗೇರುಸೊಪ್ಪ ಎಂಬ ಒಟ್ಟು 6 ಅಣೆಕಟ್ಟೆಗಳನ್ನು ಹೊಂದಿದ್ದು, 5 ಪ್ರಮುಖ ವಿದ್ಯುತ್ ಉತ್ಪಾದನಾ ಘಟಕಗಳಿವೆ. ಇಲ್ಲಿನ 2022-23 ರ ವರದಿಯಂತೆ ಕೆಪಿಸಿಯು ಉತ್ತರ ಕನ್ನಡ ಜಿಲ್ಲೆಯಿಂದ 4,473 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದೆ.
ಕೆಪಿಸಿ ಜಲವಿದ್ಯುತ್‌ನಿಂದ 12,955.86 ದಶ ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ 5 ಜಲ ವಿದ್ಯುತ್ ಘಟಕಗಳು ತನ್ನ ಸಾಮರ್ಥ್ಯದ ಶೇ.95 ಕ್ಕಿಂತ ಹೆಚ್ಚು ಬಳಕೆಯಾಗುತ್ತಿವೆ. ಕಳೆದ ವರ್ಷ 4,473.41 ದಶ ಲಕ್ಷ ವಿದ್ಯುತ್ ಉತ್ಪಾದನೆ ಮಾಡಿ ರಾಜ್ಯದ ಗ್ರಿಡ್‌ಗೆ ಪೂರೈಸಲಾಗಿದೆ. 2023 ರಲ್ಲಿ 6.04 ಕೋಟಿ ರೂ.ಗಳನ್ನು ಸಾಮಾಜಿಕ ಜವಾಬ್ದಾರಿ ನಿಽಯಲ್ಲಿ ಖರ್ಚು ಮಾಡಲಾಗುತ್ತಿದೆ. ಆದರೆ, ಜಿಲ್ಲೆಗೆ ಅದರ ಲಾಭ ಇಲ್ಲ ಎಂಬುದೇ ಆಶ್ಚರ್ಯ.

ಜಿಲ್ಲೆಯ ಜನರ ತ್ಯಾಗದ ಫಲ

ಸೂಪಾ ಯೋಜನೆಗಾಗಿ ಜಿಲ್ಲೆಯ ಒಂದು ತಾಲೂಕು ಕೇಂದ್ರವನ್ನೇ ಸ್ಥಳಾಂತರಿಸಲಾಗಿದೆ. ಜಲವಿದ್ಯುತ್ ಯೋಜನೆಗಳಿಗಾಗಿ ಜಿಲ್ಲೆಯ 50 ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 5 ಸಾವಿರ ಕುಟುಂಬಗಳನ್ನು ಇದುವರೆಗೆ ಸ್ಥಳಾಂತರಿಸಲಾಗಿವೆ. ಆಗ ಬಿಡಿಗಾಸು ಪರಿಹಾರ ಪಡೆದ ಹಲವು ಕುಟುಂಬಗಳು ಜೀವನ ಮಾಡಲಾಗದೇ ನಿರ್ನಾಮವಾಗಿವೆ. ಕೆಲವರಿಗೆ ಇನ್ನೂ ಪರಿಹಾರ ಕೂಡ ಬಂದಿಲ್ಲ. ಕೆಪಿಸಿಯಿಂದ ನಿರಾಶ್ರಿತರಾದ ಕುಟುಂಬಗಳು ಜೊಯಿಡಾದ ರಾಮನಗರ, ಅಂಕೋಲಾದ ಡೊಂಗ್ರಿ ಹೀಗೆ ವಿವಿಧೆಡೆ ಪುನರ್ವಸತಿ ಕೇಂದ್ರಗಳಲ್ಲಿ ವಾಸಿಸುತ್ತಿವೆ. ಆ ಹಳ್ಳಿಗಳಿಗೆ ಮೂಲ ಸೌಕರ್ಯವಿಲ್ಲ. ಆದರೆ, ಕೆಪಿಸಿ ಅವುಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕನಿಷ್ಠ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ.

ನೆರೆಯಿಂದ ಸಮಸ್ಯೆ

ಕೆಪಿಸಿ ಅಣೆಕಟ್ಟೆ ಕಟ್ಟಿ, ವಿದ್ಯುತ್ ಉತ್ಪಾದನೆ ಮಾಡಿ ಲಾಭ ಗಳಿಸುವ ಬರದಲ್ಲಿ ಒಮ್ಮೊಮ್ಮೆ ಜನರ ಸಮಸ್ಯೆಗಳ ಬಗ್ಗೆ ಹಮನ ಹರಿಸುವುದಿಲ್ಲ. 2019, 2021 ರಲ್ಲಿ ಪೂರ್ವ ಸೂಚನೆ ಇಲ್ಲದೇ ಬೇಕಾಬಿಟ್ಟಿ ನೀರು ಬಿಟ್ಟ ಪರಿಣಾಮ ನೆರೆ ಸಂಭವಿಸಿ, ಕಾಳಿ ಹಾಗೂ ಶರಾವತಿ ನದಿ ತಟದಲ್ಲಿ ಸಾಕಷ್ಟು ಕುಟುಂಬಗಳು ನಿರಾಶ್ರಿತವಾಗಿದ್ದವು. ಸಾವಿರಾರು ಕೋಟಿ ರೂ. ನಷ್ಟವಾಗಿತ್ತು. ಆದರೆ, ಆಗ ಕೆಪಿಸಿ ಸ್ಪಂದನೆಯನ್ನೇ ಮಾಡದೇ ಇತ್ತು.

ಮಹತ್ವದ ಸಂಗತಿಗಳು

*ಕೆಪಿಸಿಯಿಂದ ಪ್ರತಿ ವರ್ಷ 6 ರಿಂದ 9 ಸಾವಿರ ಕೋಟಿ ಮೊತ್ತದ ವಿದ್ಯುತ್ ಮಾರಾಟ
*ಕೆಪಿಸಿಗೆ ಪ್ರತಿ ವರ್ಷ 300 ರಿಂದ 500 ಕೋಟಿ ರೂ.ಗಳಷ್ಟು ಲಾಭ
*ಸಾಮಾಜಿಕ ಜವಾಬ್ದಾರಿ ನಿಽಯಲ್ಲಿ ಪ್ರತಿ ವರ್ಷ ರಾಜ್ಯದ ವಿವಿಧೆಡೆ 6 ರಿಂದ 15 ಕೋಟಿ ರೂ. ಖರ್ಚು

  • ರಾಜ್ಯದ ಒಟ್ಟಾರೆ ವಿದ್ಯುಯತ್ ಉತ್ಪಾದನೆಯ ಶೇ.14.23 ರಷ್ಟು ಜಿಲ್ಲೆಯ ಅಣೆಕಟ್ಟೆಗಳಿಂದ ಪೂರೈಕೆ
    *ರಾಜ್ಯದ ಜಲವಿದ್ಯುತ್ ಉತ್ಪಾದನೆಯ ಶೇ. 34.52 ರಷ್ಟು ವಿದ್ಯುತ್ ಉತ್ತರ ಕನ್ನಡ ಜಿಲ್ಲೆಯಿಂದಲೇ ಪೂರೈಕೆ

  • ಜಿಲ್ಲೆಯಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಿದ ಪರಿಣಾಮ ಸಾಕಷ್ಟು ಊರುಗಳು ಹಿನ್ನೀರಿನಲ್ಲಿ ದ್ವೀಪದಂತಾಗಿವೆ. ಅಲ್ಲಿನ ಜನರಿಗೆ ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಇವರದ್ದೇ ಅಣೆಕಟ್ಟೆಗಳಿಗಾಗಿ ಜಾಗ ಬಿಟ್ಟುಕೊಟ್ಟವರ ನಿರಾಶ್ರಿತರ ಕಾಲನಿಗಳ ಜನ ರಸ್ತೆಗಾಗಿ, ನೀರಿಗಾಗಿ ನ್ಯಾಯಾಲಯಕ್ಕೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಕೆಪಿಸಿ ಇದುವರೆಗೂ ಸಿಎಸ್‌ಆರ್ ನಿಽಯಲ್ಲಿ ನಯಾ ಪೈಸೆ ಜಿಲ್ಲೆಗೆ ವ್ಯಯಿಸದೇ ಇರುವುದು ಘೋರ ಅಪರಾಧ. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತಬೇಕು.
    ಶಿವರಾಮ ಗಾಂವಕರ್
    ಕೊಡಸಳ್ಳಿ ಅಣೆಕಟ್ಟೆ ನಿರಾಶ್ರಿತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net