

* ಅಗ್ನಿ ಶಾಮಕ ಇಲಾಖೆ ಅನುಮತಿ ಕೊಟ್ಟಿರಲೇ ಇಲ್ಲ
* ಹಲವರಿಗೆ ನೋಟೀಸ್ ನೀಡಲು ಮುಂದಾದ ಪೊಲೀಸರು
ಗಂಗಾಧರ್ ಬೈರಾಪಟ್ಟಣ ರಾಮನಗರ
ಕೆಪಿಸಿಎಲ್‌ನಿಂದ ನಿರ್ಮಾಣಗೊಂಡಿರುವ ಬಿಡದಿ ಬಳಿಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಸ್ಥಾವರ ಉದ್ಘಾಟನೆಗೂ ಮುನ್ನವೇ ನಾಲ್ವರ ಸಾವಿಗೆ ಕಾರಣವಾಗಿದ್ದು, ಇಲ್ಲಿನ ಒಂದೊಂದೇ ಲೋಪಗಳು ಬೆಳಕಿಗೆ ಬರುತ್ತಿವೆ.
ಐಎಸ್‌ಜಿಇಸಿ ಕಂಪನಿ ಪ್ರಾಯೋಗಿಕವಾಗಿ 11.5 ಮೆಗಾ ವಾಟ್ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಿದ್ದರೂ, ಈ ಸ್ಥಾವರಕ್ಕೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣ ಪತ್ರವನ್ನೇ ಪಡೆದಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.
ಯಾವುದೇ ಕಾರ್ಖಾನೆ ಆದರೂ ಒಂದು ವೇಳೆ ಅಗ್ನಿ ಅವಘಡ ಸಂಭವಿಸಿದರೆ ಕಾರ್ಮಿಕರ ರಕ್ಷಣೆ ಹೇಗೆ ಮಾಡಬೇಕು ಮತ್ತು ಅಗ್ನಿ ನಂದಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ನುರಿತ ಸಿಬ್ಬಂದಿ ಇರಬೇಕು. ಆದರೆ, ಕೆಪಿಸಿಎಲ್ ಸ್ಥಾವರದಲ್ಲಿ ಇಂತಹ ಯಾವುದೇ ತರಬೇತಿ ಹೊಂದಿದ ಸಿಬ್ಬಂದಿಯೂ ಇರಲಿಲ್ಲ. ಜತೆಗೆ ಅಗ್ನಿ ಶಾಮಕ ಇಲಾಖೆಯಿಂದ ದೊರೆಯುತ್ತಿದ್ದ ಉಚಿತ ತರಬೇತಿಯನ್ನು ಯಾರೂ ಪಡೆದಿರಲಿಲ್ಲ.
ಇದು ಕಾರ್ಮಿಕರ ಕಾಳಜಿ ಬಗೆಗೆ ಗುತ್ತಿಗೆ ಪಡೆದ ಕಂಪನಿ ತೋರಿದ ನಿರ್ಲಕ್ಷೃವಾಗಿತ್ತು. ಒಂದು ವೇಳೆ, ಕಂಪನಿ ತರಬೇತಿ ಕೊಡಿಸಿದ್ದರೆ ಎಲ್ಲರ ಪ್ರಾಣವೂ ಉಳಿಯುತಿತ್ತು. ಮತ್ತೊಂದು ಆಶ್ಚರ್ಯವೆಂದರೆ ಜ.4ರಂದು ಘಟನೆ ಅಗ್ನಿ ದುರಂತ ಸಂಭವಿಸಿದರೂ ಸ್ಥಳೀಯ ಅಗ್ನಿ ಶಾಮಕ ಕಚೇರಿಗೆ ಮಾಹಿತಿಯನ್ನು ಕಂಪನಿ ನೀಡಿರಲೇ ಇಲ್ಲ ಎನ್ನುವ ಅಂಶವೂ ಬೆಳಕಿಗೆ ಬಂದಿದೆ.
ಯಾವುದೇ ವಾಣಿಜ್ಯ ಮತ್ತು ಕೈಗಾರಿಕೆಯ ಹೊಸ ಕಟ್ಟಡ ನಿರ್ಮಾಣವಾಗಬೇಕಾದರೆ ಅಗ್ನಿ ಶಾಮಕ ಇಲಾಖೆ ಅನುಮತಿ ಕಡ್ಡಾಯ. ಆದರೆ, ಅನುಮತಿ ನೀಡುವ ಮುನ್ನ ಇಲಾಖೆ ತನ್ನದೇ ಆದ ಮಾನದಂಡವನ್ನು ಹೊಂದಿದೆ. ಜಿ-1, ಜಿ-2, ಜಿ-3 ಎಂಬ ಮೂರು ವರ್ಗಗಳನ್ನು ಹೊಂದಿದೆ. ಇದರಲ್ಲಿ ಬಿಡದಿಯಲ್ಲಿ ಕೆಪಿಸಿಎಲ್‌ನಿಂದ ನಿರ್ಮಾಣಗೊಂಡಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಸ್ಥಾವರ ಜಿ -3 ವರ್ಗಕ್ಕೆ ಸೇರಿದ್ದಾಗಿದೆ.
ಬೆಂಕಿ ಹೊತ್ತಿಕೊಳ್ಳದ ಕಾರ್ಖಾನೆಗಳಿಗೆ ನೀಡುವ ಅನುಮತಿ ಜಿ-1 ವರ್ಗಕ್ಕೆ, ಬೆಂಕಿ ಹೊತ್ತಿಕೊಂಡರೂ ಪ್ರಾಣಾಂತಕವಾಗದ ವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳು ಜಿ-2 ವರ್ಗದಲ್ಲೂ, ತಕ್ಷಣವೇ ಬೆಂಕಿ ಹೊತ್ತಿಕೊಳ್ಳುವ ಮತ್ತು ಪ್ರಾಣಕ್ಕೂ ಎರವಾಗಬಹುದಾದ ಕಾರ್ಯಾಚರಣೆ ನಡೆಸುವ ಕಾರ್ಖಾನೆಗಳು ಜಿ-3 ವರ್ಗಕ್ಕೆ ಸೇರಿದ್ದಾಗಿವೆ.
ಕಟ್ಟಡದ ಎತ್ತರದ ಆಧಾರದ ಮೇಲೂ ಅನುಮತಿ ವಿತರಣೆ ಹಂಚಿಕೆಯಾಗಿದೆ. 15 ಮೀಟರ್ ಎತ್ತರದ ಕಟ್ಟಡಗಳಿಗೆ ಸ್ಥಳೀಯ ಅಗ್ನಿ ಶಾಮಕ ಅಧಿಕಾರಿಯಿಂದ, 15-21 ಮೀಟರ್ ಎತ್ತರದ ಕಟ್ಟಗಳಿಗೆ ವಲಯ ಅಗ್ನಿ ಶಾಮಕ ಅಧಿಕಾರಿಯಿಂದ 21 ಮೀಟರ್ ಮೇಲ್ಪಟ್ಟ ಎತ್ತರದ ಕಟ್ಟಡಗಳಿಗೆ ಅಗ್ನಿ ಶಾಮಕ ಇಲಾಖೆ ಡಿಜಿ ಕಚೇರಿಯಿಂದಲೇ ನಿರಪೇಕ್ಷಣಾ ಪತ್ರ ಪಡೆದುಕೊಳ್ಳಬೇಕು. ಅಲ್ಲದೆ 15 ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡಕ್ಕೆ ಸ್ಥಳೀಯವಾಗಿ, ಇದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಿಗೆ ಅಗ್ನಿ ಶಾಮಕ ಇಲಾಖೆ ಡಿಜಿ ಕಚೇರಿಯಲ್ಲಿಯೇ ಅನುಮತಿ ಪಡೆದುಕೊಳ್ಳಬೇಕು.
ಒಂದೆಡೆ ಅಗ್ನಿ ಶಾಮಕ ಇಲಾಖೆಯಿಂದ ಕೆಪಿಸಿಎಲ್ ಅನುಮತಿ ಪಡೆದಿಲ್ಲ ಎನ್ನುವ ಮಾಹಿತಿ ಹರಿದಾಡುತ್ತಿದ್ದಂತೆ ತನಿಖೆಯನ್ನು ಚುರುಕುಗೊಳಿಸುವ ಬಿಡದಿ ಪೊಲೀಸರು ವಿವಿಧ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಸ್ಥಾವರಕ್ಕೆ ವಿವಿಧ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ (ಎನ್‌ಓಸಿ) ಪಡೆಯಲಾಗಿದೆಯೇ ಎಂದು ಕೆಪಿಸಿಎಲ್‌ನ ಎಂಡಿ, ಮುಖ್ಯ ಇಂಜಿನಿಯರ್, ಪ್ಲಾಂಟ್‌ನ ಉಸ್ತುವಾರಿ ಹೊಂದಿದ್ದ ಅಧೀಕ್ಷಕ ಇಂಜಿನಿಯರ್, ಕಾರ್ಯಾಚರಣೆ ಜವಾಬ್ದಾರಿ ಹೊತ್ತಿದ್ದ ಐಎಸ್‌ಜಿಇಸಿ ಕಂಪನಿ ಮತ್ತು ಆರ‌್ಬಿಟ್ ಕಂಪನಿಗಳಿಗೆ.
ನಿರಪೇಕ್ಷಣಾ ಪತ್ರವನ್ನು ನೀಡಲಾಗಿತ್ತೆ? ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸುವಂತೆ ಕೋರಿ ಕಾರ್ಖಾನೆಗಳು ಬಾಯ್ಲಯರ್‌ಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥೃ ಇಲಾಖೆ ರಾಮನಗರ ಜಿಲ್ಲೆಯ ಜಿಲ್ಲಾ ಅಧಿಕಾರಿ ಸೇರಿದಂತೆ ವಿವಿಧ ಹಂತದ ಸಿಬ್ಬಂದಿ ಹಾಗೂ ಅಗ್ನಿ ಶಾಮಕ ಸಿಬ್ಬಂದಿಗೆ ನೋಟಿಸ್ ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.