ರೈತರ ಬೆಳೆ ಖರೀದಿಸಿ ಬಡವರಿಗೆ ಹಂಚಲು ಕರೆ: ಎಲ್ಲ ಜನಪ್ರತಿನಿಧಿಗಳಿಗೆ ಡಿಕೆಶಿ ಕರೆ, ಪಕ್ಷಾತೀತ ಕಾರ್ಯಾಚರಣೆಗೆ ಮನವಿ

DKS
Published on

ಬೆಂಗಳೂರು: ರೈತರು ಹೊಲಗಳಲ್ಲಿ ಬೆಳೆದಿರುವ ಸೊಪ್ಪು, ಹಣ್ಣು, ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಖರೀದಿಸದ ಪರಿಣಾಮ ಬೆಳೆಗಳೆಲ್ಲ ಹಾಳಾಗುತ್ತಿವೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಪಕ್ಷದ ಪದಾಧಿಕಾರಿಗಳು ರೈತರ ಉತ್ಪನ್ನ ಖರೀದಿಸಿ ಬಡವರಿಗೆ ಹಂಚಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ಕೊಟ್ಟಿದ್ದಾರೆ.

ರೈತರ ಬೆಳೆ ಹೊಲಗಳಲ್ಲೇ ಕೊಳೆತು ಹೋಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ರಾಜ್ಯದ ಎಲ್ಲ ಸಂಸದರು, ಶಾಸಕರುಗಳು, ಎಲ್ಲ ಪಕ್ಷಗಳ ನಾಯಕರು ಅವರವರ ಕ್ಷೇತ್ರಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ರೈತರು ಬೆಳೆದಿರುವ ಹಣ್ಣು-ತರಕಾರಿ, ಸೊಪ್ಪುಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ, ಬಡವರಿಗೆ ಹಂಚಬೇಕು ಎಂದು ಮನವಿ ಮಾಡಿದ್ದಾರೆ. ಇದು ಪಕ್ಷಾತೀತ ವಾಗಿ ನಡೆಯಬೇಕು. ಹೀಗೆ ಮಾಡುವುದರಿಂದ ಸಂಕಷ್ಟದಲ್ಲಿರುವ ರೈತರನ್ನು ಉಳಿಸಿದಂತಾಗುತ್ತದೆ. ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಿ, ಅವರ ಹಸಿವನ್ನೂ ನೀಗಿಸಿದಂತಾಗುತ್ತದೆ. ಇದು ಕೊರೋನಾ ವಿರುದ್ಧ ಹೋರಾಟದ ಪ್ರಮುಖ ಭಾಗವಾಗಬೇಕಿದೆ ಎಂದಿದ್ದಾರೆ.

ಶಿವಕುಮಾರ್-ಪರಮೇಶ್ವರ್ ಭೇಟಿ, ಚರ್ಚೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಹಿರಿಯ ಮುಖಂಡ ಜಿ.ಪರಮೇಶ್ವರ್ ಅವರನ್ನು ಶನಿವಾರ ಭೇಟಿ ಮಾಡಿ, ಕರೊನಾ ಬೆಳವಣಿಗೆ ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ಹತ್ತು ವರ್ಷಗಳ ಅನುಭವವಿರುವ ಪರಮೇಶ್ವರ್ ಅವಧಿಯಲ್ಲಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಕೊರನಾ ಪರಿಣಾಮ ತಗ್ಗಿದ ಬಳಿಕ ಪಕ್ಷದ ಪದಾಧಿಕಾರಿ ನೇಮಕ, ವಿವಿಧ ಘಟಕಗಳ ಪುನಾರಚನೆಯಾಗಬೇಕಿದೆ. ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಡಿಕೆಶಿ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net