ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನ ಮುಂದೆ ಆಲಂಗಳ ಸಮಾಗಮ

kottur alam
ಕೊಟ್ಟೂರಿನಲ್ಲಿ ಶನಿವಾರ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಮುಂದೆ ಸಮಾಗಮಗೊಂಡ ಪೀರಲ ದೇವರುಗಳಿಗೆ ದೇವಸ್ಥಾನದ ಪುರೋಹಿತರು ಪೂಜೆ ಸಲ್ಲಿಸಿದರು. ಕೊಟ್ಟೂರಲ್ಲಿ ಹರಕೆ ಹೊತ್ತ ಭಕ್ತರ ಮೇಲೆ ಪೀರಲದೇವರುಗಳು ಸಾಗಿದವು.
Published on

ಕೊಟ್ಟೂರು: ಪಟ್ಟಣದ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಬಳಿ ಶನಿವಾರ ಎದುರಾದ 20ಕ್ಕೂ ಹೆಚ್ಚು ಪೀರಲ ದೇವರುಗಳಿಗೆ ಶ್ರೀಸ್ವಾಮಿಯ ಪುರೋಹಿತರು ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯ ಮತ್ತು ಸಾಮರಸ್ಯ ಸಾರಿದರು.

ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಪೀರಲ ದೇವರುಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಅನಾದಿಕಾಲದಿಂದಲೂ ಆಚರಿಸಿಕೊಂಡು ಬರಲಾಗಿದೆ. ಕೊಟ್ಟೂರೇಶ್ವರ ಸ್ವಾಮಿ ಮತ್ತು ಪೀರಲದೇವರು ಸಮಾಗಮವಾಗುವ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಹಿಂದು ಮತ್ತು ಮುಸ್ಲಿಮರು ಸೇರಿದ್ದರು.

ಪಟ್ಟಣದ ವಿವಿಧ ಕಡೆ ಐದು ದಿನಗಳ ಹಿಂದೆ ಪ್ರತಿಷ್ಠಾಪನೆಗೊಂಡಿದ್ದ ಪೀರಲ ದೇವರುಗಳನ್ನು ಹೊತ್ತ ಸಾಗುವಾಗ ಹರಕೆ ಹೊತ್ತ ನೂರಾರು ಜನ ಅಡ್ಡಲಾಗಿ ದೀರ್ಘದಂಡ ನಮಸ್ಕಾರ ಹಾಕಿದರು. ದೇವರ ಹೊತ್ತವರು ಭಕ್ತರನ್ನು ದಾಟಿಕೊಂಡು ಮುಂದೆ ಸಾಗುವ ದೃಶ್ಯ ಹಿಂದು-ಮುಸ್ಲಿಂ ಸೌಹಾರ್ದವನ್ನು ಸಾರುವಂತಿತ್ತು.

ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಪುರೋಹಿತರು ಪಿರಲದೇವರಿಗೆ ಪೂಜೆ ಮಾಡಿ, ತೆಂಗಿನಕಾಯಿ ಸಮರ್ಪಿಸಿದರು.ಈ ಸಂದರ್ಭದಲ್ಲಿ ಹಿಂದು-ಮುಸ್ಲಿಮರು ಪರಸ್ಪರ ಶುಭಕೋರಿದರು. ಪೀರಲದೇವರಿಗೆ ಲೋಬಾನ ಅರ್ಪಿಸಿ ಕೈಮುಗಿದರು. ಮುಸ್ಲಿಮರಿಗಿಂತ ಹಿಂದುಗಳೇ ಅಧಿಕ ಸಂಖ್ಯೆಯಲ್ಲಿದ್ದು ಮತ್ತೊಂದು ವಿಶೇಷ. ನಂತರ ಗಚ್ಚಿನ ಮಠಕ್ಕೆ ಆಗಮಿಸಿದ ಪೀರಲದೇವರಿಗೂ ಪೂಜೆ ಸಲ್ಲಿಸಲಾಯಿತು.


ಸವಾಲು-ಜವಾಬು: ಶುಕ್ರವಾರ ರಾತ್ರಿ ಪೀರಲದೇವರ ಮುಂದೆ ಸವಾಲು-ಜವಾಬು ಪದಗಳ ಕಾರ್ಯಕ್ರಮ ನಡೆಯಿತು. ದೇವರ ಮುಂದಿನ ಅಗ್ನಿಕುಂಡದಲ್ಲಿ ಹಿಂದು-ಮುಸ್ಲಿಮರು ಹಾಯುವ ಮೂಲಕ ಹರಕೆ ತೀರಿಸಿದರು. ಕತಲ್ ರಾತ್ರಿಯ ನಂತರ ಬೆಳಗಿನ ಜಾವ, ಪಟ್ಟಣದ ಎಲ್ಲ ಪೀರಲು ದೇವರುಗಳು ಶ್ರೀ ಕೊಟ್ಟೂರೇಶ್ವರ ಸ್ವಾಮಿ ದೇವಾಲಯದ ಮುಂದೆ ಸಮಾಗಮಗೊಂಡು ಪರಸ್ಪರ ಆಲಿಂಗಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net