

ವಿಜಯವಾಣಿ ಸುದ್ದಿಜಾಲ ಬೈಂದೂರು
ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಪ್ರಥಮ ಬಾರಿಗೆ ರೈತೋತ್ಸವ ಮತ್ತು ಕೋಟಿ-ಚೆನ್ನಯ ಜೋಡುಕರೆ ಕಂಬಳ ಏ.17ರಿಂದ 20ರವರೆಗೆ ನಡೆಯಲಿದ್ದು, ಹೊಸಾಡು ಗ್ರಾಪಂ ವ್ಯಾಪ್ತಿಯ ಮುಳ್ಳಿಕಟ್ಟೆಯ ನಗು ಸಿಟಿ ಮೈದಾನದಲ್ಲಿ ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದು ತಾಲೂಕು ರೈತ ಸಂಘ ಅಧ್ಯಕ್ಷ ನೆಲ್ಯಾಡಿ ದೀಪಕ್‌ಕುಮಾರ್ ಶೆಟ್ಟಿ ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಗುರುವಾರ ಜೋಡುಕೆರೆ ಕಂಬಳ, ರೈತೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ, ಬ್ಯಾನರ್ ಬಿಡುಗಡೆಗೊಳಿಸಿ ಮಾತನಾಡಿದರು.
ಬೈಂದೂರು ತಾಲೂಕು ರೈತ ಸಂಘದ ಆಶ್ರಯದಲ್ಲಿ ತಾಲೂಕು ಕಂಬಳ ಸಮಿತಿ ಸಹಯೋಗದಲ್ಲಿ ಇದೇ ಮೊದಲ ಬಾರಿ ಕಂಬಳ ಆಯೋಜನೆ ಮಾಡಲಾಗುತ್ತಿದೆ. ಮೊದಲ ಮೂರು ದಿನಗಳ ರೈತೋತ್ಸವ, ಕೊನೆಯ ಎರಡು ದಿನ ಕಂಬಳೋತ್ಸವಕ್ಕಾಗಿ ವೈವಿಧ್ಯಮಯ ಕಾರ್ಯಕ್ರಮಗಳ ಜೋಡಣೆ ಮಾಡಲಾಗಿದೆ ಎಂದರು. ತಾಪಂ ಮಾಜಿ ಸದಸ್ಯ ಕೊಲ್ಲೂರು ರಮೇಶ ಗಾಣಿಗ, ಗ್ರಾಪಂ ಸದಸ್ಯ ಶಿವರಾಮಕೃಷ್ಣ ಭಟ್, ಸಹಕಾರಿ ಉಪಾಧ್ಯಕ್ಷ ಜಯಪ್ರಕಾಶ ಶೆಟ್ಟಿ, ಮಹಿಳಾ ಮಂಡಲ ಅಧ್ಯಕ್ಷೆ ಲತಾ ಶೆಟ್ಟಿ, ಪ್ರಮುಖರಾದ ಗಿರೀಶ್ ಬೈಂದೂರು, ಪ್ರಜ್ವಲ್ ಶೆಟ್ಟಿ ಕಾಲ್ತೋಡು, ಎ.ಆನಂದ ಖಾರ್ವಿ, ಸುಜಯೀಂದ್ರ ಶೆಟ್ಟಿ, ಜಗದೀಶ್ ಕೊಲ್ಲೂರು, ಎಂ.ಆರ್.ಶೆಟ್ಟಿ ಸೇರಿದಂತೆ ಅನೇಕ ಕಂಬಳ ಆಸಕ್ತರು ಇದ್ದರು. ಬೆಳಗ್ಗೆ ಶ್ರೀ ಮೂಕಾಂಬಿಕಾ ದೇವರಿಗೆ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಎಲ್ಲ ಧರ್ಮದವರು, ರೈತರು ಭಾಗವಹಿಸುವ ನಿರೀಕ್ಷೆ ಇದೆ. ಹಿಂದೆಲ್ಲ ಕಂಬಳವೆಂದರೆ ಕೃಷಿಕರ ಹಾಗೂ ರೈತರ ಹಬ್ಬ ಎನ್ನುವ ಭಾವನೆಯಿತ್ತು. ಅದೇ ಭಾವನೆ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಕಂಬಳ ಸೇರಿ ಐದು ದಿನಗಳ ಕಾಲ ವಿವಿಧ ಕ್ಷೇತ್ರಗಳ ಉತ್ಸವ, ವಾಣಿಜ್ಯ ಮೇಳ, ಅಮ್ಯೂಸ್‌ಮೆಂಟ್ ಪಾರ್ಕ್, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡುವ ಬಗ್ಗೆ ಆಲೋಚಿಸಲಾಗಿದೆ. ನೆಲ್ಯಾಡಿ ದೀಪಕ್‌ಕುಮಾರ್ ಶೆಟ್ಟಿ ಬೈಂದೂರು ತಾಲೂಕು ರೈತ ಸಂಘ ಅಧ್ಯಕ್ಷ