ಅಧ್ಯಕ್ಷರ ಮೇಲೆ ಮುಗಿಬಿದ್ದ ಸ್ವಪಕ್ಷೀಯರು: ರಸ್ತೆಗಾಗಿ ಧರಣಿ ತಡೆದ ಪ್ರತಿಪಕ್ಷ ನಾಯಕ

New Project (9)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಒಂದೆಡೆ ರಸ್ತೆ ನಿರ್ಮಾಣ ಆಗದ ಹಿನ್ನೆಲೆಯಲ್ಲಿ ಪಕ್ಷೇತರ ಸದಸ್ಯ ಧರಣಿಗೆ ಮುಂದಾಗಿದ್ದು, ಪ್ರತಿಪಕ್ಷ ನಾಯಕ ತಡೆಯುವಲ್ಲಿ ಯಶಸ್ವಿಯಾದರು. ಆದರೆ ಅಧ್ಯಕ್ಷೆಯ ನಡೆಯನ್ನು ಸ್ವಪಕ್ಷೀಯರೇ ಖಂಡಿಸಿ ಮುಗಿಬಿದ್ದ ವಿಲಕ್ಷಣ ಪ್ರಸಂ ಕೋಟೆಕಾರ್ ಪ.ಪಂ.ಯ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಕೋಟೆಕಾರು ಪ.ಪಂ. ಸಾಮಾನ್ಯ ಸಭೆ ಮಂಗಳವಾರ ಅಧ್ಯಕ್ಷೆ ದಿವ್ಯಾ ಸತೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. 11ನೇ ವಾರ್ಡ್‌ನ ಸಾಯಿನಗರದ ಸರ್ಕಾರಿ ಜಾಗದಲ್ಲಿ ರಸ್ತೆ ನಿರ್ಮಿಸುವಂತೆ ಹಲವು ಬಾರಿ ಮಾಡಿದ ಮನವಿ ಫಲಕಾರಿಯಾಗಿಲ್ಲ. ಅಲ್ಲಿ ಏಳು ಮನೆಗಳಿದ್ದರೂ ರಸ್ತೆಯಿಲ್ಲ. ಪಕ್ಕದ ಸರ್ಕಾರಿ ಜಾಗದಲ್ಲಿ ರಸ್ತೆ, ಬಯಲು ರಂಗಮಂದಿರ, ಮೈದಾನ ನಿರ್ಮಾಣ ಮಾಡುವುದಾಗಿ ಪಂಚಾಯಿತಿಯಿಂದ ಸರ್ವೇ ಕಾರ್ಯ ನಡೆದಿದೆ ಎಂದು ಪಕ್ಷೇತರ ಸದಸ್ಯ ಹರೀಶ್ ರಾವ್ ಕಣ್ಣಿಗೆ ಬಟ್ಟೆ ಕಟ್ಟಿ ಧರಣಿ ಕೂರಲು ಮುಂದಾದರು.

ಈ ಸಂದರ್ಭ ಪ್ರತಿಪಕ್ಷ ನಾಯಕ ಅಹ್ಮದ್ ಬಾವ ತಡೆದರು. ಶೀಘ್ರ ತಾತ್ಕಾಲಿಕ ರಸ್ತೆಯನ್ನಾದರೂ ಮಾಡದಿದ್ದಲ್ಲಿ ಮುಂದಿನ ಸಾಮಾನ್ಯ ಸಭೆಯಲ್ಲಿ ಧರಣಿ ಕೂರುವುದಾಗಿ ಎಚ್ಚರಿಸಿದರು.

ಅಧ್ಯಕ್ಷೆ ದಿವ್ಯಾ ಶೆಟ್ಟಿ ಪ್ರತಿಕ್ರಿಯಿಸಿ, 11ನೇ ವಾರ್ಡ್‌ನಲ್ಲಿ ರಸ್ತೆ ಮಾಡಲು ಆಕ್ಷೇಪಣೆ ಇದೆ. ಅಲ್ಲಿ ಸರ್ವೇ ಆಗಬೇಕಿದ್ದು, ತಹಸೀಲ್ದಾರ್ ಪುಟ್ಟರಾಜು ಕಂದಾಯ ನಿರೀಕ್ಷಕರ ಬಳಿ ಚರ್ಚಿಸಲು ಹೇಳಿದ್ದಾರೆ. ಕಂದಾಯ ನಿರೀಕ್ಷಕರು ಗಡಿ ಗುರುತು ಮಾಡಲು ಸೂಚನೆ ನೀಡಿದ್ದಾರೆ ಎಂದರು. ಇದಕ್ಕೆ ಆಕ್ರೋಶಗೊಂಡ ಹರೀಶ್ ರಾವ್, ತಹಸೀಲ್ದಾರ್ ಪುಟ್ಟರಾಜು ಬಳಿ ಅಲೆದಾಡಿ ನನಗೆ ಸಾಕಾಗಿದೆ. ರಸ್ತೆ ಮಾಡುತ್ತೀರಾ, ಇಲ್ಲವಾ ಎಂದು ತಿಳಿಸಿ. ಭರವಸೆ ಬೇಕಾಗಿಲ್ಲ ಎಂದರು.

ತೆರಿಗೆ ಹೆಚ್ಚಳ ಮಾಡುವ ಬಗ್ಗೆ ಮುಖ್ಯಾಧಿಕಾರಿ ಮಾಲಿನಿ ಸಭೆಯಲ್ಲಿ ಪ್ರಸ್ತಾಪಿಸಿದಾಗ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಹಿಟ್ಲರ್ ಆಡಳಿತ ಮಾಡಬೇಡಿ

ತೆರಿಗೆ ಸೋರಿಕೆ ತಡೆಗಟ್ಟುವಿಕೆ, ನಿರ್ಣಯಗಳ ಕಾರ್ಯಗತಗೊಳಿಸುವಿಕೆ, ವಿವಿಧ ಸಮಸ್ಯೆಗಳ ಪರಿಹಾರಕ್ಕೆ ರಚಿಸಲಾದ ಸ್ಥಾಯಿ ಸಮಿತಿಗಳ ಸಭೆ ಇದುವರೆಗೂ ಕರೆದಿಲ್ಲ. ಸಭೆ ಕರೆಯದಿದ್ದರೆ ಸಮಿತಿ ಅವಶ್ಯಕತೆಯಾದರೂ ಏನೆಂದು ಸ್ವಪಕ್ಷದ ಸದಸ್ಯ ಧೀರಜ್ ಪ್ರಶ್ನಿಸಿದರು. ಸಮಿತಿ ಸಭೆ ಸದ್ಯಕ್ಕೆ ಕರೆಯುವುದಿಲ್ಲ, ಸ್ವಲ್ಪ ಸಮಯ ಕಳೆಯಲಿ ಎಂದು ಅಧ್ಯಕ್ಷೆ ನೀಡಿದ ಉತ್ತರಕ್ಕೆ ಕೆರಳಿದ ಧೀರಜ್ ಮತ್ತು ಸುಜಿತ್, ಸಭೆ ಕರೆಯಲು ಕಷ್ಟವಾಗುವುದಾದರೆ ಸಮಿತಿ ಬರ್ಖಾಸ್ತು ಮಾಡಿ. ಹಿಟ್ಲರ್ ಆಡಳಿತ ಮಾಡಬೇಡಿ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net