ಕೋಟೆ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ

Kote temple - 2
Published on

ಬೆಂಗಳೂರು: ನಗರದ ಕೋಟೆ ದೇವಾಲಯದ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ವೈಶಾಖ ಶುದ್ಧ ನವಮಿ ದಿನವಾದ ಶುಕ್ರವಾರದಂದು ವೈಭವಯುತವಾಗಿ ನಡೆಯಿತು.

ದೇವಾಲಯದಲ್ಲಿ ಮುಂಜಾನೆಯಿಂದಲೇ ಸ್ವಾಮಿಗೆ ಅಭಿಷೇಕ, ಅಲಂಕಾರ, ತೋಮಾಲ ಸೇವೆ ಸೇರಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಅರವಂಟಿಗೆ ಸೇವೆ ನಂತರ ವಿಶೇಷವಾಗಿ ಅಲಂಕೃತಗೊಂಡಿದ್ದ ಸ್ವಾಮಿಯ ಉತ್ಸವ ಮೂರ್ತಿಯನ್ನು ಹೊತ್ತ ಬೆಳ್ಳಿ ರಥವು ಬೆಳಗ್ಗೆ 10 ಗಂಟೆಗೆ ಸಲ್ಲುವ ಶುಭ ಕರ್ಕಾಟಕ ಲಗ್ನದಲ್ಲಿ ದೇವಾಲಯದಿಂದ ಹೊರಟು ಮಕ್ಕಳ ಕೂಟ, ಮಿಂಟೋ ಆಂಜನೇಯ ಸ್ವಾಮಿ ದೇವಾಲಯ ಮಾರ್ಗವಾಗಿ ದೇವಾಲಯ ತಲುಪಿತು.

ಸಂಜೆ ದೇವಾಲಯದಲ್ಲಿ ಹೂವಿನ ಚಕ್ರ ಉತ್ಸವ ನಡೆಯಿತು. ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ಮುಂಜಾನೆಯಿಂದ ರಾತ್ರಿವರೆಗೂ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.

ಶನಿವಾರ ಬೆಳಗ್ಗೆ ಪಲ್ಲಕ್ಕಿ ಉತ್ಸವ ಹಾಗೂ ಸಂಜೆ ಅಶ್ವವಾಹನೋತ್ಸವ ನಡೆಯಲಿದೆ. ಮೇ 10ರಂದು ಆರಂಭವಾಗಿರುವ ರಥೋತ್ಸವ ಮೇ 27ರವರೆಗೆ ನಡೆಯಲಿದ್ದು, ಆಸ್ಥಾನ ಸೇವೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ದೇವಾಲಯದ ಅರ್ಚಕರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net