

ಕಿಕ್ಕೇರಿ: ಇಲ್ಲಿನ ಕೋಟೆ ಮಾರಿಕಾಂಬ ದೇವಿ ಹಬ್ಬ ಸಂಭ್ರಮ ಸಡಗರದಿಂದ ಭಾನವಾರ ಜರುಗಿತು.
ವಿಜಯನಗರದ ಸಾಮಂತ ದೊರೆಗಳ ಆಳ್ವಿಕೆಯ ಪಾಳೇಗಾರರ ಕಾಲದಲ್ಲಿ ನಿರ್ಮಿತವಾದ ಕೋಟೆ ಗಣಪತಿ, ಆಂಜನೇಯ ಗುಡಿಗೆ ಹೊಂದಿಕೊಂಡಿರುವ ಪುರಾತನ ಮಾರಮ್ಮ ಗುಡಿ ತನ್ನದೆ ಆದ ಶಕ್ತಿ, ಮಹಿಮೆಯನ್ನು ಹೊಂದಿರುವ ಸಲುವಾಗಿ ಹೋಬಳಿಯ ವಿವಿಧೆಡೆಯಿಂದ ಅಧಿಕವಾಗಿ ಭಕ್ತರು ಆಗಮಿಸಿದ್ದರು.
ದೇವಿಗೆ ಎಣ್ಣೆ ಮಜ್ಜನ, ಎಳನೀರು ಅಭಿಷೇಕ ನೆರವೇರಿಸಿ, ಬೇವಿನ ಸೊಪ್ಪಿನಿಂದ ತಂಪು ಮಾಡಿದರು. ಬೆಳಗ್ಗಿನಿಂದಲೂ ಮಹಿಳೆಯರು, ಮಕ್ಕಳು ಗುಡಿಗೆ ಆಗಮಿಸಿ ಸಾಲು ನಿಂತು ದೇವಿಯ ತಲೆ ಮೇಲೆ ಗಂಗಾಜಲ ಸುರಿಯುವ ಮೂಲಕ ತಂಪು ಮಾಡಿದರು. ಜತೆಗೆ ಎಣ್ಣೆ ಮಜ್ಜನ, ಅರಿಶಿನ ಹಾಕಿ, ಬೇವಿನ ಸೊಪ್ಪನ್ನು ಮುಡಿಗೆ ಅರ್ಪಿಸಿದರು.
ರೋಗರುಜಿನ ರಕ್ಷಕಿ ದೇವಿ ಎಂದೇ ಕರೆಯುವ ಕೋಟೆ ಮಾರಮ್ಮನಿಗೆ ಹೋಬಳಿಯ ಸುತ್ತಮುತ್ತಲಿನಿಂದ ನೂರಾರು ಭಕ್ತರು ಆಗಮಿಸಿದ್ದರು. ಗಣಪತಿ ದೇವರಿಗೆ ಮೊದಲ ಪೂಜೆ ಸಲ್ಲಿಸಿ ನಂತರ ದೇವಿಗೆ ಜಲಾಭಿಷೇಕ ಮಾಡಲು ಕಾದು ನಿಂತಿದ್ದರು.
ಊರ ಮಾರಮ್ಮ ಗ್ರಾಮ ರಕ್ಷಕಿಯಾಗಿದ್ದು ಮಕ್ಕಳಿಗೆ ಸಿಡುಬು, ದಡಾರ, ಕೊರೊನಾದಂತಹ ವೈರಾಣು, ಸಾಂಕ್ರಾಮಿಕ ರೋಗಗಳು ಬಾರದಂತೆ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದರು.
ದೇವಿಗೆ ತಂಬಿಟ್ಟಿನ ಆರತಿ, ಹೂವಿನ ಆರತಿ ಬೆಳಗಿದ ಮಹಿಳೆಯರು ಹಣ್ಣು ಕಾಯಿ ಅರ್ಪಿಸಿ ದೀಪ, ದೂಪದಾರತಿ ಬೆಳಗಿದರು. ಅವರೆಕಾಳು ಸಾಂಬಾರು, ಮುದ್ದೆ, ತಂಬಿಟ್ಟು, ಅನ್ನದ ತಳಿಗೆಯನ್ನು ದೇವಿಗೆ ನೈವೇದ್ಯವಾಗಿ ಸಮರ್ಪಿಸಿದರು.