ತುಂಡು ತುಂಡಾದ ದೇಹ ಮಹಿಳೆಯದ್ದು !

Crime_Krt
Published on

ಕೊರಟಗೆರೆ: ಕೊಲೆ ಮಾಡಿ ಮನುಷ್ಯ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅಂಗಾಂಗಗಳನ್ನು ರಸ್ತೆಯುದ್ದಕ್ಕು ಎಸೆದು ಕ್ರೌರ್ಯ ಮೆರೆಯಲಾಗಿದ್ದ ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿದೆ. ಗುರುವಾರ ತಡರಾತ್ರಿ ದೊಗ್ಗನಹಳ್ಳಿ ಬೆಸ್ಕಾಂ ಸ್ಟೇಷನ್​ ಬಳಿ ತಲೆ ಬುರುಡೆ ಪತ್ತೆಯಾಗಿದ್ದು ತುಂಡರಿಸಿದ್ದ ಶವವು ಮಹಿಳೆಯದ್ದೆಂಬುದು ದೃಢಪಟ್ಟಿದೆ. ಈ ಪ್ರಕರಣದ ಹಿಂದೆ "ವಾಮಾಚಾರ' ನಡೆದಿರುವ ಶಂಕೆ ಮೂಡಿದೆ.

ಮಹಿಳೆಯನ್ನು ಕೊಲೆಗೈದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ದೇಹದ ಅಂಗಾಂಗಗಳನ್ನು ಪ್ಲಾಸ್ಟಿಕ್​ ಕವರ್​ಗಳಲ್ಲಿಟ್ಟು ಕೊರಟಗೆರೆ ತಾಲೂಕಿನ ಕೆಲವು ಕಡೆ ರಸ್ತೆಯುದ್ದಕ್ಕೂ ಎಸೆದಿದ್ದು ಗುರುವಾರ ಜನತೆಯಲ್ಲಿ ಭೀತಿ ಹುಟ್ಟುಹಾಕಿತ್ತು. ಈ ದೇಹವು ಪುರಷನದ್ದೋ, ಮಹಿಳೆಯದ್ದೋ ಎಂಬ ಅನುಮಾನ ಮೂಡಿದ್ದು ಗುರುವಾರ ತಡರಾತ್ರಿ ತಲೆಬುರುಡೆ ಪತ್ತೆಯಾಗುತ್ತಿದ್ದಂತೆ ಇದು ಮಹಿಳೆಯದ್ದೆಂಬುದು ಖಚಿತವಾಗಿದೆ.

ಹೆಚ್ಚುವರಿ ಪೊಲೀಸ್​ ಅಧೀಕ್ಷಕರಾದ ಗೋಪಾಲ್​, ಪುರುಷೋತ್ತಮ್​ ಸೇರಿದಂತೆ ಮಧುಗಿರಿ, ಪಾವಗಡ, ಕೊರಟಗೆರೆ ಸಿಪಿಐಗಳು ನೇತೃತ್ವದ 5 ತಂಡಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ತೊಡಗಿವೆ. ಪೊಲೀಸರ ಮಾಹಿತಿ ಪ್ರಕಾರ ಮಹಿಳೆಯ ತುಂಡರಿಸಿದ ದೇಹದ ಶೇ.60ರಷ್ಟ ಅಂಗಾಂಗಗಳು ಮಾತ್ರ ಪತ್ತೆಯಾಗಿದ್ದು ಇನ್ನೂ ಶೇ. 40 ರಷ್ಟು ಭಾಗಗಳು ಪತ್ತೆಯಾಗಿಲ್ಲ. ದೇಹದ ಅಂಗಾಗಳು ಕೊಳೆತ ಸ್ಥಿತಿಯಲ್ಲಿ ಇದ್ದು ತನಿಖೆಗೆ ಕಷ್ಟವಾಗುತ್ತಿದೆ ಎನ್ನಲಾಗಿದೆ.

ಜಿಲ್ಲೆಯಾದ್ಯಂತ ಎಲ್ಲಾ ಠಾಣೆಯಲ್ಲಿ ಮಹಿಳೆಯ ನಾಪತ್ತೆ ಪ್ರಕರಣಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ವಿಕೃತ ಮನಸ್ಸಿನ ವ್ಯಕ್ತಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ವಾಮಾಚಾರ ಶಂಕೆ

ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ದೊಡ್ಡಸಾಗ್ಗೆರೆ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿ ಸಮೀಪದಮುತ್ಯಾಲಮ್ಮ ದೇವಾಲಯದ ಬಳಿಯಿಂದ ಲಿಂಗಾಪುರ ಸೇತುವೆ,ಚಿಂಪುಗಾನಹಳ್ಳಿ ಸೇತುವೆ, ಬೆಂಡೋಣಿ, ಸಿದ್ದರಬೆಟ್ಟದ ನರ್ಸರಿ ಸೇರಿದಂತೆ ಒಟ್ಟು 11 ಕಡೆಗಳಲ್ಲಿ ದೇಹದ ಭಾಗಗಳನ್ನು ಪ್ಲಾಸ್ಟಿಕ್​ ಕವರ್​ನಲ್ಲಿ ಕಟ್ಟಿ ಎಸೆಯಲಾಗಿದ್ದು ಪ್ರತಿ ಕವರ್​ನಲ್ಲಿ ಮೆಟಲ್​ ಪೀಸ್​ಗಳು ದೊರೆತಿದ್ದು ಇದು ವಾಮಾಚಾರಕ್ಕಾಗಿ ನಡೆದಿರುವಂತಹ ಹತ್ಯೆಯ್ಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ಈ ದೃಷ್ಟಿಕೋನದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಿಸಿಟಿವಿಫೂಟೇಜ್

ಈ ಬೀಭತ್ಸ ಕೃತ್ಯವು ಪೊಲೀಸರ ನಿದ್ದಗೆಡಿಸಿದ್ದು ಆರೋಪಿಯ ಜಾಡು ಹಿಡಿದು ಹೊರಟಿರುವ ಪೊಲೀಸರು ಕಳೆದ 3-4 ದಿನಗಳಿಂದ ತಾಲೂಕಿನ ಈ ಮಾರ್ಗದಲ್ಲಿ ಸಿಸಿಟಿವಿ ಫೂಟೇಜ್​ ಪರಿಶೀಲನೆಗೆ ಮುಂದಾಗಿದ್ದಾರೆ. ವಾಹನಗಳ ಮಾಹಿತಿ ಹಾಗೂ ಅನುಮಾಸ್ಪದವಾಗಿ ರಾತ್ರಿವೇಳೆ ಸಂಚರಿಸಿರುವ ವಾಹನಗಳ ಮಾಹಿತಿ ಕಲೆಹಾಕುತ್ತಿದ್ದಾರೆ. ಇನ್ನುಳಿದ ದೇಹದ ಅಂಗಾಂಗಗಳ ಶೋಧವನ್ನು ಒಂದು ತಂಡ ಮುಂದುವರೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net