ದೇಶ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ

PRIME-MINISTOR-VARTUAL-MEETING
ಕೊಪ್ಪಳದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಂಡಿದ್ದ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ, ಪ್ರಮುಖರಾದ ಆನಂದ ಗುಪ್ತಾ, ಕೆ.ಜಿ.ಕುಲಕರ್ಣಿ, ಮಹಾಂತೇಶ ಮೈನಳ್ಳಿ, ಎಚ್.ಗಿರೇಗೌಡ, ಮಧುರಾ ಕರ್ಣಂ, ವಾಣಿಶ್ರೀ ಮಠದ ಇದ್ದರು.
Published on

ಕೊಪ್ಪಳ: ದೇಶ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ. ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಗತಿಗೆ ಹಗಲಿರುಳು ಶ್ರಮಿಸುತ್ತಿದ್ದು, ಅವರ ಕೈ ಬಲಪಡಿಸಲು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ. ಕೊಪ್ಪಳದಲ್ಲಿ ಪಕ್ಷದ ಅಭ್ಯರ್ಥಿ ಮಂಜುಳಾ ಕರಡಿ ಗೆಲುವಿಗೆ ಶ್ರಮಿಸಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಗುರುವಾರ ಹಮ್ಮಿಕೊಂಡಿದ್ದ ಪ್ರಧಾನಿ ಮೋದಿ ಹಾಗೂ ಪಕ್ಷದ ಕಾರ್ಯಕರ್ತರೊಂದಿಗಿನ ವರ್ಚುವಲ್ ಸಂವಾದದಲ್ಲಿ ಮಾತನಾಡಿದರು.

ಹಲವು ಹೊಸತನಗಳಿಗೆ ಹೆಸರಾದ ಬಿಜೆಪಿ

ಕೊಪ್ಪಳ ಕ್ಷೇತ್ರ ಕಳೆದ 10 ವರ್ಷದಲ್ಲಿ ಸಾಕಷ್ಟು ಹಿಂದುಳಿದಿದೆ. ರಸ್ತೆ ಸೇರಿ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ. ಇದರಿಂದ ಜನರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ನೀರಾವರಿ ಯೋಜನೆಗಳು ನನೆಗುದಿಗಿದೆ ಬಿದ್ದಿವೆ. ಹಲವು ಹೊಸತನಗಳಿಗೆ ಹೆಸರಾದ ಬಿಜೆಪಿ ಹಲವು ದಶಕಗಳ ಬಳಿಕ ಕ್ಷೇತ್ರದಲ್ಲಿ ಮಹಿಳೆಗೆ ಟಿಕೆಟ್ ನೀಡಿದೆ. ಮಂಜುಳಾ ಅವರನ್ನು ಗೆಲ್ಲಿಸಿ ಹೊಸ ಇತಿಹಾಸ ಸೃಷ್ಟಿಗೆ ನೀವೆಲ್ಲ ಕಾರಣರಾಗಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ ಮಾತನಾಡಿ, ಸಾಮಾನ್ಯ ಮಹಿಳೆಯಾದ ನನ್ನನ್ನು ಗುರುತಿಸಿ ಪಕ್ಷ ಅವಕಾಶ ನೀಡಿದೆ. ಇದು ಎಲ್ಲ ಮಹಿಳೆಯರಿಗೆ ಸಂದ ಗೌರವ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಗೆದ್ದು ಶಾಸಕಿಯಾಗುವ ವಿಶ್ವಾಸವಿದೆ.

ನನ್ನ ಮಾವನವರಾದ ಸಂಸದ ಸಂಗಣ್ಣ ಕರಡಿ ಕಳೆದ ಮೂವತ್ತು ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ನಾನು ಅಧಿಕಾರಕ್ಕೆ ಬಂದಲ್ಲಿ ನಿಮ್ಮೆಲ್ಲರ ಆಶೋತ್ತರಗಳಗೆ ತಕ್ಕಂತೆ ಕೆಲಸ ಮಾಡುವೆ. ನೀವೆಲ್ಲ ನನಗೆ ಆಶೀರ್ವಾದ ಮಾಡಿ ಎಂದರು.

ಬಳಿಕ ಕಾರ್ಯಕ್ರಮದಲ್ಲಿ ಕೆಲ ಯುವತಿಯೊಂದಿಗೆ ಸಂವಾದ ನಡೆಸಿದರು. ಪ್ರಮುಖರಾದ ಅಮರೇಶ ಕರಡಿ, ಆನಂದ ಗುಪ್ತಾ, ಕೆ.ಜಿ. ಕುಲಕರ್ಣಿ, ಆರ್.ಬಿ.ಪಾನಘಂಟಿ, ಅಪ್ಪಣ್ಣ ಪದಕಿ, ಮಹಾಂತೇಶ ಮೈನಳ್ಳಿ, ಎಚ್.ಗಿರೇಗೌಡ, ರಾಜು ಬಾಕಳೆ, ಮಧುರಾ ಕರ್ಣಂ, ವಾಣಿಶ್ರೀ ಮಠದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net