More

    29ರಂದು ವಿಜಯಪುರಕ್ಕೆ ಪ್ರಧಾನಿ ನರೇಂದ್ರ ಮೋದಿ – ಬಸನಗೌಡ ಪಾಟೀಲ

    ವಿಜಯಪುರ: ವಿಧಾನ ಸಭೆ ಚುನಾವಣೆ ಪ್ರಚಾರಕ್ಕಾಗಿ ಏ. 29ರಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಜಿಲ್ಲೆಯ ಎಂಟು ಮತಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ವಿಜಯಪುರ ನಗರ ಶಾಸಕ, ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಮೋದಿಯವರು ಮಧ್ಯಾಹ್ನ 2 ಗಂಟೆಗೆ ಸೈನಿಕ ಶಾಲೆ ಮೈದಾನದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ. ಈಗ ಒಂದು ಸಮೀಕ್ಷೆ ಪ್ರಕಾರ ಬಿಜೆಪಿಗೆ 107 ಸ್ಥಾನ ಬರಬಹುದು ಎಂಬ ನಿರೀಕ್ಷೆ ಇದ್ದು, ಪ್ರಧಾನಿ ಮೋದಿಯವರು ಆಗಮಿಸಿದ ಮೇಲೆ ಹೆಚ್ಚುವರಿಯಾಗಿ 30 ರಿಂದ 40 ಸ್ಥಾನಗಳು ಹೆಚ್ಚಿಗೆ ಬರುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ಯೋಗಿ ಆದಿತ್ಯನಾಥ್ 25ಕ್ಕೆ ಆಗಮನ

    ಇದಕ್ಕೂ ಮುನ್ನ ಏಪ್ರಿಲ್ 25ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿಜಯಪುರಕ್ಕೆ ಆಗಮಿಸಲಿದ್ದಾರೆ. ಅವರ ಜತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಹ ಆಗಮಿಸಲಿದ್ದು, ಪಕ್ಷದ ಅಭ್ಯರ್ಥಿಗಳ ಪರ ದೇವರಹಿಪ್ಪರಗಿಯಲ್ಲಿ ಬಹಿರಂಗ ಸಭೆ ನಡೆಸಿ, ಮತಯಾಚನೆ ಮಾಡಲಿದ್ದಾರೆ ಎಂದರು.

    ರಾಹುಲ್‌ಗಾಂಧಿ ಬಿಜೆಪಿ ಸ್ಟಾರ್ ಪ್ರಚಾರಕ

    ಕಾಂಗ್ರೆಸ್‌ನವರು ರಾಹುಲ್ ಗಾಂಧಿ ಅವರನ್ನು ಬಸವ ಜಯಂತಿ ಹೆಸರಲ್ಲಿ ಕೂಡಲಸಂಗಮಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ಹಿಂದೆ ಅವರಿಗೆ ಬಸವಣ್ಣನವರ ವಚನವನ್ನೇ ಸರಿಯಾಗಿ ಹೇಳಲು ಆಗಲಿಲ್ಲ. ಅಂತದ್ದರಲ್ಲಿ ಹೇಗೆ ಲಿಂಗಾಯತರ ಪರವಾಗಿ ಮತಯಾಚನೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

    ರಾಹುಲ್ ಗಾಂಧಿ ಬಂದಲ್ಲೆಲ್ಲ ಬಿಜೆಪಿ ಗೆಲುವು ಸಾಧಿಸುತ್ತೆ. ಒಂದು ರೀತಿಯಲ್ಲಿ ಅವರು ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದಾರೆ. ಏಕೆಂದರೆ ಅವರು ಪ್ರಚಾರ ಮಾಡಿದಷ್ಟೂ ಬಿಜೆಪಿಗೆ ಅಧಿಕ ಲಾಭವಾಗುತ್ತದೆ. ಅವರು ಈಗ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದರೆ ನಾನು ಅಂದಾಜು 50 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತೇನೆ. ರಾಹುಲ್-ಸಿದ್ದರಾಮಯ್ಯ ಇಬ್ಬರೂ ಬಿಜೆಪಿ ಸ್ಟಾರ್ ಪ್ರಚಾರಕರು. ಅವರು ಹೋದಲೆಲ್ಲಾ ಕಾಂಗ್ರೆಸ್ ನೆಲಕಚ್ಚಿ ಬಿಜೆಪಿ ಜಯಭೇರಿ ಭಾರಿಸುತ್ತದೆ. ಎಂದರು.

    ಲಿಂಗಾಯತ ಸಿಎಂ ಭ್ರಷ್ಟರಾ?

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು’ ಎಂದು ಹೇಳಿದ್ದಾರೆ. ಹಾಗಾದರೆ ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ಸಿಎಂಗಳು ಭ್ರಷ್ಟರಾ? ಎಂದು ಪ್ರಶ್ನಿಸಿದ ಯತ್ನಾಳ, ಕೂಡಲೇ ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯದ ಬೇಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ಹಿಂದೆ ವೀರಶೈವ ಲಿಂಗಾಯತಯ ಧರ್ಮ ಒಡೆಯಲು ಹೋಗಿ ಪಕ್ಷವನ್ನು ಹೀನಾಯ ಸ್ಥಿತಿಗೆ ತಂದಿದ್ದರು. ಅವರು ಅದನ್ನು ಮರೆತಿದ್ದಾರೆ ಎಂದು ಚಾಟಿ ಬೀಸಿದರು.

    ಮೇ 10ಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಕೊನೆ ಮೊಳೆ

    ಮೇ 10ರಂದು ಮತದಾನ ನಡೆಯಲಿದ್ದು, ಅಂದು ರಾಜ್ಯದ ಪ್ರಬುದ್ಧ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಉಳಿದಿರುವ ಒಂದೇ ಒಂದು ಕೊನೆಯ ಮೊಳೆ ಹೊಡಿತಾರೆ. ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರಿಗೆ ಸಿಎಂ ಆಗಲು ಬಿಡುವುದಿಲ್ಲ. ಎಂ.ಬಿ. ಪಾಟೀಲ ಅವರನ್ನು ಸಿಎಂ ಆಗಲು ಎಲ್ಲಿ ಬಿಡ್ತಾರೆ. ಡಿಕೆಶಿ, ಸಿದ್ರಾಮಯ್ಯ ಅವರು ಎಂಬಿಪಿ ಸಿಎಂ ಆಗಲು ಬಿಡ್ತಾರಾ? ಎಂದು ಪ್ರಶ್ನಿಸಿದರು.

    ಬಂಡಾಯ ಶಮನ

    ಪಕ್ಷದಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಬಂಡಾಯವಾಗಿ ಸ್ಪರ್ಧಿಸಿರುವವರ ಜತೆ ಮಾತುಕತೆ ನಡೆಸಿದ್ದು ಫಲಪ್ರದವಾಗಿದೆ. ನಾಳೆ ಬಂಡಾಯ ಬಿಜೆಪಿ ಅಭ್ಯರ್ಥಿಗಳು ಬಹುತೇಕ ಎಲ್ಲರೂ ನಾಮಪತ್ರ ಹಿಂದಕ್ಕೆ ಪಡೆಯಲಿದ್ದಾರೆ. ಪಕ್ಷ ನನಗೆ ಆ ಜವಾಬ್ದಾರಿ ನೀಡಿತ್ತು. ಅದನ್ನು ಮಾಡಿದ್ದೇನೆ. ಸದ್ಯ ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ ಎಂದು ಯತ್ನಾಳ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಘವ ಅಣ್ಣಿಗೇರಿ, ಶಿವರುದ್ರ ಬಾಗಲಕೋಟ, ವಿಜಯ ಜೋಷಿ ಅನೇಕ ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts