ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕೊಪ್ಪಳಕ್ಕೆ 2ನೇ ಸ್ಥಾನ

SSLC TOPERS
Published on

ಕೊಪ್ಪಳ: ಎಸ್ಸೆಸ್ಸೆಲ್ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಶೇ.90.27 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕೊಪ್ಪಳ ದ್ವಿತೀಯ ಸ್ಥಾನ ಪಡೆದಿದೆ. ಯಲಬುರ್ಗಾ ತಾಲೂಕಿನ ಬಳೂಟಗಿ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿ ಕಾರ್ತಿಕ್ ಬಿ.ಎನ್. 623 ಅಂಕಗಳನ್ನು ಪಡೆದು ಜಿಲ್ಲೆಗೆ ಟಾಪರ್ ಆಗಿದ್ದಾರೆ.

ಕಳೆದ ವರ್ಷ ಶೇ.87.71 ಫಲಿತಾಂಶ ಪಡೆಯುವ ಮೂಲಕ ಜಿಲ್ಲೆ ಎ ಗ್ರೇಡ್ ಪಡೆದಿತ್ತು. 2019-20ರಲ್ಲಿ ಶೇ.66.99 ಫಲಿತಾಂಶ ಪಡೆದು 23ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. 2020-2021ರಲ್ಲಿ ಕೋವಿಡ್ ಕಾರಣ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು.

ದಕ್ಷಿಣ ಜಿಲ್ಲೆಗಳನ್ನು ಕೊಪ್ಪಳ ಹಿಂದಿಕ್ಕಿರುವುದು ವಿಶೇಷ

ಸದ್ಯ ಈ ವರ್ಷ ಫಲಿತಾಂಶದಲ್ಲಿ ಶೇ.03.27 ಏರಿಕೆಯಾಗಿದ್ದು, ರಾಜ್ಯಮಟ್ಟದಲ್ಲಿ ದಕ್ಷಿಣ ಜಿಲ್ಲೆಗಳನ್ನು ಕೊಪ್ಪಳ ಹಿಂದಿಕ್ಕಿರುವುದು ವಿಶೇಷ. ಅದರಲ್ಲೂ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಎರಡನೇ ಸ್ಥಾನ ಪಡೆದಿದ್ದು, ಜಿಲ್ಲೆಯ ಕೀರ್ತಿ ಹೆಚ್ಚುವಂತೆ ಮಾಡಿದೆ.

2022-23ನೇ ಸಾಲಿನಲ್ಲಿ 10,682 ಬಾಲಕರು, 11,104 ಬಾಲಕಿಯರು ಸೇರಿ 21,786 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 19,667 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 9377 ಬಾಲಕರು (ಶೇ.87.78), 10,290 ಬಾಲಕಿಯರು (ಶೇ.92.67)ಪಾಸ್ ಆಗಿದ್ದು, ಬಾಲಕರನ್ನು ಎಂದಿನಂತೆ ಹಿಂದಿಕ್ಕಿ ಮೇಲುಗೈ ಸಾಧಿಸಿದ್ದಾರೆ.

ನಗರ ಪ್ರದೇಶದಲ್ಲಿ 1953 ಬಾಲಕರು, 2314 ಬಾಲಕಿಯರು ಸೇರಿ 4267 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 1715 ಬಾಲಕರು (ಶೇ.87.81), 2113 ಬಾಲಕಿಯರು (ಶೇ.91.31) ಒಟ್ಟು 3828(ಶೇ.89.71) ಮಕ್ಕಳು ಉತ್ತೀರ್ಣರಾಗಿದ್ದಾರೆ.

ಗ್ರಾಮೀಣ ಭಾಗದಲ್ಲಿ 8729 ಬಾಲಕರು, 8790 ಬಾಲಕಿಯರು ಸೇರಿ 17519 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇವರಲ್ಲಿ 7662 ವಿದ್ಯಾರ್ಥಿಗಳು (ಶೇ.87.78), 8177 ವಿದ್ಯಾರ್ಥಿನಿಯರು (ಶೇ.93.03) ಸೇರಿ ಒಟ್ಟು 15,839 (ಶೇ.90.41) ಮಕ್ಕಳು ಪಾಸ್ ಆಗಿದ್ದು, ನಗರ ಪ್ರದೇಶದ ಮಕ್ಕಳನ್ನು ಹಿಂದಿಕ್ಕಿದ್ದಾರೆ.

ಸರ್ಕಾರಿ ಶಾಲೆಯ 16382 ವಿದ್ಯಾರ್ಥಿಗಳ ಪೈಕಿ 14652 (ಶೇ.89.44) ಪಾಸ್ ಆಗಿದ್ದಾರೆ. 2399 ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಲ್ಲಿ 2115 (ಶೇ.88.16) ಮತ್ತು 3005 ಖಾಸಗಿ ಶಾಲೆ ವಿದ್ಯಾರ್ಥಿಗಳಲ್ಲಿ 2900 (ಶೇ.96.51) ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಕುಷ್ಟಗಿ ತಾಲೂಕಿನಲ್ಲಿ 4532 ವಿದ್ಯಾರ್ಥಿಗಳ ಪೈಕಿ 4125 (ಶೇ.89.71), ಯಲಬುರ್ಗಾದಲ್ಲಿ 4544 ವಿದ್ಯಾರ್ಥಿಗಳಲ್ಲಿ 4150 (ಶೇ.90.03), ಗಂಗಾವತಿಯ 6894 ವಿದ್ಯಾರ್ಥಿಗಳಲ್ಲಿ 6411 (ಶೇ.92.13) ಹಾಗೂ ಕೊಪ್ಪಳ ತಾಲೂಕಿನಲ್ಲಿ 5816 ವಿದ್ಯಾರ್ಥಿಗಳಲ್ಲಿ 19667 (ಶೇ.84.62) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಗಂಗಾವತಿ ತಾಲೂಕು ಉಳಿದೆಲ್ಲ ತಾಲೂಕುಗಳಿಗಿಂತ ಹೆಚ್ಚು ಫಲಿತಾಂಶ ಪಡೆದಿರುವುದು ವಿಶೇಷ.

ಕಾರ್ತಿಕ್ ಜಿಲ್ಲೆಗೆ ಟಾಪರ್

ಯಲಬುರ್ಗಾ ತಾಲೂಕಿನ ಬಳೂಟಗಿ ಸರ್ಕಾರಿ ಪ್ರೌಢ ಶಾಲೆಯ ಕಾರ್ತಿಕ್ ಬಿ.ಎನ್. 623 ಅಂಕ (ಶೇ.99.68) ಪಡೆದು ಜಿಲ್ಲೆಗೆ ಟಾಪರ್ ಆಗಿದ್ದಾರೆ. ಇನ್ನು ಕುಷ್ಟಗಿ ಕ್ರಿಸ್ತ್ ದ ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅಮೃತಾ ಬಳಿಗಾರ 621 ಅಂಕ (ಶೇ.99.36) ಪಡೆದು ದ್ವಿತೀಯ ಮತ್ತು ಕೊಪ್ಪಳದ ಎಸ್‌ಎಫ್‌ಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅನ್ಸರ್ ಹಸನ್ 620 ಅಂಕ (ಶೇ.99.2)ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net