ಹಾಸನ: ಕಳೆದ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಮೊದಲ ಸ್ಥಾನ ಪಡೆಯಲು ನಾನಾಗಲಿ, ರೇವಣ್ಣ ಆಗಲಿ ಕಾರಣ ಎಂದು ಎಲ್ಲಿಯೂ ಹೇಳಿಲ್ಲ, ಮುಂದೆಯು ಹೇಳುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದರು.
ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಕಳೆದ ಬಾರಿಯ ಫಲಿತಾಂಶ ಮುಂದುವರಿಸುವ ಪ್ರಯತ್ನವಾಗಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲೆಯ ಪ್ರೌಢಶಾಲೆ ಶಿಕ್ಷಕರು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕಳೆದ ಐದಾರು ವರ್ಷಗಳಿಂದ ಹಾಸನ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿತ್ತು.
31ನೇ ಸ್ಥಾನದಲ್ಲಿ ಇದ್ದ ಜಿಲ್ಲೆ ಕಳೆದ ವರ್ಷ ಪ್ರಥಮ ಸ್ಥಾನ ಪಡೆದಿದೆ. ಇದಕ್ಕೆ ಕಾರಣರಾದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಧನ್ಯವಾದಗಳು. ಪೋಷಕರ ಸಭೆ ನಡೆಸಿರುವುದು ಹಾಸನ ಜಿಲ್ಲೆಯಲ್ಲಿ ಮಾತ್ರ ಎಂದರು.
ರೇವಣ್ಣ ಅವರು ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಕಾರಣಕ್ಕೆ ಎಲ್ಲ ರೀತಿಯ ಶಾಲಾ-ಕಾಲೇಜುಗಳನ್ನು ಜಿಲ್ಲೆಗೆ ತಂದಿದ್ದಾರೆ.
ಜಿಲ್ಲೆ ಶೈಕ್ಷಣಿಕವಾಗಿ ಮುಂದುವರಿಯಬೇಕೆಂಬುದು ಅವರ ಉದ್ದೇಶ. ಇದಕ್ಕೆ ಜಿಲ್ಲೆಯ ಎಲ್ಲ ಶಿಕ್ಷಕರು, ಅಧಿಕಾರಿಗಳು ಕೈಜೋಡಿಸಿದ್ದರಿಂದ ಮೊದಲ ಸ್ಥಾನ ಪಡೆದಿದೆ.
ಅಧಿಕಾರ ಇರಲಿ, ಇಲ್ಲದಿರಲಿ ರೇವಣ್ಣ ಕೆಲಸ ಮಾಡುತ್ತಾರೆ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಸಹಕಾರದಿಂದ ಮೊದಲ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ಹತ್ತಿರವಿದ್ದು ಶಿಕ್ಷಕರು ಪೋಷಕರ ಸಭೆ ನಡೆಸಬೇಕು.
ಈ ಬಾರಿಯೂ ಮೊದಲ ಸ್ಥಾನ ಉಳಿಸಿಕೊಳ್ಳಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು, ಜಿಲ್ಲಾ ಮತ್ತು ತಾಲೂಕು ಮಟ್ಟದಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.