

ಕುಷ್ಟಗಿ: ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಬಿಡಬೇಕೆಂದು ಆಗ್ರಹಿಸಿ ರೈಲ್ವೆ ಹೋರಾಟ ಸಮಿತಿ ಪಟ್ಟಣಕ್ಕೆ ಆಗಮಿಸಿದ್ದ ಸಂಸದ ರಾಜಶೇಖರ ಹಿಟ್ನಾಳಗೆ ಮನವಿ ಸಲ್ಲಿಸಿತು.
ಸಂಸದ ಹಿಟ್ನಾಳ್ ಮಾತನಾಡಿ, ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸೇವೆ ಆರಂಭಿಸುವುದು ಸುಲಭವಲ್ಲ. ರೈಲಿನ ನಿರ್ವಹಣೆ, ನೀರು ತುಂಬಿಸುವ ವ್ಯವಸ್ಥೆ, ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವುದು, ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ಸೌಲಭ್ಯಗಳು ಇರಬೇಕು. ಆದರೆ, ಕುಷ್ಟಗಿ ರೈಲು ನಿಲ್ದಾಣದಲ್ಲಿ ರೈಲುಗಳ ನಿರ್ವಹಣೆ ಹಾಗೂ ಸರ್ವಿಸಿಂಗ್‌ಗೆ ಅಗತ್ಯ ಸೌಕರ್ಯಗಳ ಕೊರತೆ ಇದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಬೆಂಗಳೂರಿಗೆ ನೇರ ರೈಲು ಆರಂಭಿಸುವುದು ಕಷ್ಟ. ಕುಷ್ಟಗಿಯಿಂದ ಸಂಜೆ ವೇಳೆ ಹುಬ್ಬಳ್ಳಿಗೆ ಮತ್ತೊಂದು ಹೆಚ್ಚುವರಿ ರೈಲು ಆರಂಭಿಸಿ ಅಲ್ಲಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ತೆರಳಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದ ಅವರು, ಪ್ರಯಾಣಿಕರ ಬೇಡಿಕೆ ಹಾಗೂ ರೈಲು ಸಂಚಾರದ ಸಾಧ್ಯತೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಿತಿಯ ಪ್ರ.ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ್, ಸದಸ್ಯ ಜೆ.ಜೆ. ಆಚಾರ್, ಉಮೇಶ ಮಂಗಳೂರು, ಮೈನುದ್ದೀನ್ ಮುಲ್ಲಾ, ಕೇದಾರನಾಥ ತುರಕಾಣಿ ಇತರರಿದ್ದರು.