ಬಾಲಮಂದಿರ ಕೊನೆಯ ಆಯ್ಕೆಯಾಗಲಿ

ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಮಹೇಶಬಾಬು ಸಲಹೆ
ಕೊಪ್ಪಳದ ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಎನ್. ಮಹೇಶಬಾಬು ಭೇಟಿ ನೀಡಿದ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ, ಜಿಲ್ಲಾ ನಿರೂಪಣಾಧಿಕಾರಿ ನಟರಾಜ, ಅಧಿಕಾರಿಗಳಾದ ಅನ್ನಪೂರ್ಣ ಹುಬಕಟ್ಟಿ, ಸಿಂಧು ಅಂಗಡಿ, ಸಿಡಿಪಿಒ ರೋಹಿಣಿ ಕೊಟಗಾರ ಇದ್ದರು.
ಕೊಪ್ಪಳದ ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಎನ್. ಮಹೇಶಬಾಬು ಭೇಟಿ ನೀಡಿದ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ, ಜಿಲ್ಲಾ ನಿರೂಪಣಾಧಿಕಾರಿ ನಟರಾಜ, ಅಧಿಕಾರಿಗಳಾದ ಅನ್ನಪೂರ್ಣ ಹುಬಕಟ್ಟಿ, ಸಿಂಧು ಅಂಗಡಿ, ಸಿಡಿಪಿಒ ರೋಹಿಣಿ ಕೊಟಗಾರ ಇದ್ದರು.
Published on

ಕೊಪ್ಪಳ: ಮಗುವಿನ ಪೋಷಣೆ, ಬೆಳವಣಿಗೆ, ರಕ್ಷಣೆಯ ಪ್ರಾಥಮಿಕ ಜವಾಬ್ದಾರಿ ಪಾಲಕರು ಅಥವಾ ಪೋಷಕರದ್ದಾಗಿದೆ. ಸಾಂಸ್ಥಿಕ ಪೋಷಣೆಯಲ್ಲಿ (ಬಾಲಮಂದಿರ) ಇರಿಸುವುದು ಕೊನೆಯ ಆಯ್ಕೆಯಾಗಬೇಕೇ ಹೊರತು ಮೊದಲ ಆದ್ಯತೆಯಾಗಬಾರದು ಎಂದು ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಎನ್.ಮಹೇಶಬಾಬು ಹೇಳಿದರು.

ನಗರದ ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ಭೇಟಿ ನೀಡಿ ಮಾತನಾಡಿದರು. ಮಕ್ಕಳನ್ನು ದೀರ್ಘಕಾಲದವರೆಗೆ ಪಾಲನಾ ಸಂಸ್ಥೆಗಳಲ್ಲಿ ಇರಿಸಿಕೊಳ್ಳಬಾರದು. ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ವಸತಿ ಸಹಿತ ಶಾಲೆಗಳಿಗೆ ದಾಖಲಿಸಬೇಕು. ಪ್ರಾಯೋಜಕತ್ವ ಯೋಜನೆಯಡಿ ನೆರವು ನೀಡಿ ಮರಳಿ ಕುಟುಂಬಕ್ಕೆ ಸೇರ್ಪಡೆಗೊಳಿಸಬೇಕು ಎಂದರು.

ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಮುಂದುವರಿಯುತ್ತಿರುವುದನ್ನು ನಿಯಮಿತವಾಗಿ ಪರಿಶೀಲಿಸಬೇಕು. ಪರಿತ್ಯಜಿಸಿದ, ಒಪ್ಪಿಸಲ್ಪಟ್ಟ ಹಾಗೂ ಪಾಲಕರಿಂದ ಪಾಲನೆ ಸಾಧ್ಯವಿಲ್ಲವೆಂದು ಮಕ್ಕಳ ಕಲ್ಯಾಣ ಸಮಿತಿಯಿಂದ ದೃಢಪಟ್ಟ ಮಕ್ಕಳನ್ನು ಕಾನೂನುಬದ್ಧ ‘ದತ್ತು ಪ್ರಕ್ರಿಯೆ’ಗೆ ಒಳಪಡಿಸಿ ಶಾಶ್ವತ ಕುಟುಂಬವನ್ನು ಕಲ್ಪಿಸಿಕೊಡಲು ಆದ್ಯತೆ ನೀಡಬೇಕು. ‘ಮಿಷನ್ ವಾತ್ಸಲ್ಯ’ ಯೋಜನೆಯಡಿ ಯಾವುದೇ ಮಗು ರಕ್ಷಣೆ ಮತ್ತು ಶಿಕ್ಷಣದಿಂದ ವಂಚಿತವಾಗಬಾರದು ಎಂದು ತಿಳಿಸಿದರು.

ಭಿಕ್ಷಾಟನೆ, ಬಾಲ ಕಾರ್ಮಿಕ ಪದ್ಧತಿಯಲ್ಲಿ ಸಿಲುಕಿರುವ ಮಕ್ಕಳನ್ನು ಪತ್ತೆಹಚ್ಚಲು ಸಂಬಂಧಪಟ್ಟ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಿಯಮಿತವಾಗಿ ಅನಿರೀಕ್ಷಿತ ದಾಳಿಗಳನ್ನು ನಡೆಸಿ ರಕ್ಷಿಸಬೇಕು. ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ, ಜಿಲ್ಲಾ ನಿರೂಪಣಾಧಿಕಾರಿ ನಟರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ ಹುಬಕಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ, ಸಿಡಿಪಿಒ ರೋಹಿಣಿ ಕೊಟಗಾರ, ಬಾಲಮಂದಿರದ ಅಧೀಕ್ಷಕ ಕೃಷ್ಣಾಸಾ ಬಾಕಳೆ, ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಪೂರ್ಣಿಮಾ ಏಳಬಾವಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net