

ಕನಕಗಿರಿ: ಪ್ರಸ್ತುತ ವ್ಯಾಪಾರೀಕರಣ ಹಾಗೂ ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಜಾನಪದದ ಪಾವಿತ್ರೃತೆ ಮಸುಕಾಗುತ್ತಿದೆ ಎಂದು ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ್ಸಾಬ್ ಕಿಲ್ಲೇದಾರ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ವಿವಿಧ ಘಟಕಗಳು ಮತ್ತು ಪಠ್ಯೇತರ ಚಟುವಟಿಗೆಗಳ ಉದ್ಘಾಟನೆ ಹಾಗೂ ಕಾಲೇಜಿನ ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೆ ಗ್ರಾಮ್ಯ ಬದುಕಿನಲ್ಲಿ ಶುದ್ಧ ಪ್ರೀತಿ, ಸಂಸ್ಕೃತಿ ಮತ್ತು ಬದುಕಿನ ಸತ್ಯಗಳನ್ನು ಮಾರ್ಮಿಕವಾಗಿ ಜಾನಪದಗಳು ಸಾರುತ್ತಿದ್ದವು. ಆ ಸಾಹಿತ್ಯಕ್ಕೆ ಸಮ್ಮೋಹಕ ಶಕ್ತಿಯಿತ್ತು. ಪ್ರೀತಿ-ವಿಶ್ವಾಸಗಳಿಂದ ಕೂಡಿದ ಆರೋಗ್ಯಕರ ಜೀವನಶೈಲಿ ಇತ್ತು. ಆದರೆ, ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮತ್ತು ನಗರೀಕರಣದ ಪ್ರಭಾವದಿಂದಾಗಿ ನಮ್ಮ ಬದುಕು ಸಂಪೂರ್ಣ ಯಾಂತ್ರಿಕವಾಗಿದೆ ಎಂದರು.
ಬೆಳಗಿನಿಂದ ರಾತ್ರಿವರೆಗೂ ಧಾವಂತ, ಒತ್ತಡದ ಕೆಲಸ ಮತ್ತು ಸಂಸ್ಕರಿಸಿದ ಜಂಕ್ಫುಡ್ ಬಳಕೆಯಿಂದಾಗಿ ಮಧುಮೇಹ, ರಕ್ತದೊತ್ತಡದಂತಹ ಅನಾರೋಗ್ಯಕರ ಸಮಸ್ಯೆಗಳು ಹೆಚ್ಚಾಗಿವೆ. ಮಾನಸಿಕ ಶಾಂತಿ ದೂರವಾಗಿ, ರೋಗಗಳ ಬೀಡಾಗುತ್ತಿದ್ದೇವೆ. ಸರಳತೆ ಹಾಗೂ ಪ್ರಕೃತಿಯೊಡನೆ ಮೈಗೂಡಿಸಿಕೊಂಡಿದ್ದ ಹಳೆಯ ಸೊಗಡನ್ನು ಮರಳಿ ನಮ್ಮದಾಗಿಸಿಕೊಂಡು, ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಮಾತ್ರವೇ ಪೂರ್ಣಪ್ರಮಾಣದ ನೆಮ್ಮದಿಯ ಜೀವನ ಸಾಧ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಬಜರಂಗ ಬಲಿ, ಭೂ ದಾನಿ ಬಸವರಾಜ ಗುಗ್ಗಳಶೆಟ್ರು ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ‘ಜ್ಞಾನಸ್ಫೂರ್ತಿ’ ಹೆಸರಿನ ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಪ್ರಮುಖರಾದ ನಫೀಸಾ ಬಾನು, ಸರ್ವಮಂಗಳಮ್ಮ ಟಿ.ಆರ್., ರಕ್ಷಿತ್ ಎ., ತಾಲೂಕು ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಕಂಚಿ, ಸಿದ್ದಯ್ಯ ಪುರಾಣಿಕ ಟ್ರಸ್ಟಿನ ಸದಸ್ಯ ರಮೇಶ್ ಬನ್ನಿಕೊಪ್ಪ ಇತರರಿದ್ದರು.