ಆಂತರಿಕ ಸವಾಲು ಎದುರಿಸಲು ಸಂಘಟನೆ ಅಗತ್ಯ

ಕನ್ಹೇರಿಮಠದ ಶ್ರೀ ಕುಮಾರದೇವರು ಹೇಳಿಕೆ ಕಾರಟಗಿಯಲ್ಲಿ ಹಿಂದೂ ಸಮಾವೇಶದ ಪೂರ್ವಭಾವಿ ಸಭೆ
ಕಾರಟಗಿಯ ಕೆರೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆ ನಡೆಯಿತು. ಕನ್ಹೇರಿಮಠದ ಶ್ರೀ ಕುಮಾರದೇವರು, ಬೂದುಗುಂಪಾದ ಕೊಟ್ಟೂರು ಶಾಖಾಮಠದ ಸಿದ್ಧೇಶ್ವರ ಸ್ವಾಮೀಜಿ,  ಸೋಮನಾಳದ ವಿಜಯಕುಮಾರ ಸ್ವಾಮೀಜಿ, ಾಜಿ ಶಾಸಕ ಬಸವರಾಜ ದಢೇಸುಗೂರು ಇತರರಿದ್ದರು.
ಕಾರಟಗಿಯ ಕೆರೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆ ನಡೆಯಿತು. ಕನ್ಹೇರಿಮಠದ ಶ್ರೀ ಕುಮಾರದೇವರು, ಬೂದುಗುಂಪಾದ ಕೊಟ್ಟೂರು ಶಾಖಾಮಠದ ಸಿದ್ಧೇಶ್ವರ ಸ್ವಾಮೀಜಿ, ಸೋಮನಾಳದ ವಿಜಯಕುಮಾರ ಸ್ವಾಮೀಜಿ, ಾಜಿ ಶಾಸಕ ಬಸವರಾಜ ದಢೇಸುಗೂರು ಇತರರಿದ್ದರು.
Published on: 

ಕಾರಟಗಿ: ಹಿಂದೂ ಸಮಾಜದ ಆಂತರಿಕ ಸವಾಲುಗಳನ್ನು ಎದುರಿಸಲು ಪರಸ್ಪರ ಜಾಗೃತಿ ಮತ್ತು ಸಂಘಟನೆ ಅಗತ್ಯ. ಬಸವಣ್ಣನವರ ತತ್ವ ಹಾಗೂ ನಿಷ್ಠೆಯನ್ನು ಅರಿತು ಧರ್ಮದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಕನ್ಹೇರಿಮಠದ ಶ್ರೀ ಕುಮಾರದೇವರು ಹೇಳಿದರು.

ಗಂಗಾವತಿ ನಗರದಲ್ಲಿ ನ.3ರಂದು ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದ ಅಂಗವಾಗಿ ಪಟ್ಟಣದ ಕೆರೆ ಬಸವೇಶ್ವರ ಕಲ್ಯಾಣ ಮಂಟದದಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು. ಗಂಗಾವತಿಯಲ್ಲಿ ನಡೆಯುವ ಕಾರ್ಯಕ್ರಮ ಹಿಂದುಗಳ ಪಾಲಿಗೆ ನಡೆದಾಡುವ ವಿಶ್ವವಿದ್ಯಾಲಯದಂತೆ ಕಂಡುಬರಲಿದೆ. 300ಕ್ಕೂ ಅಧಿಕ ಸ್ವಾಮೀಜಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಕೊಪ್ಪಳ ಜಿಲ್ಲೆಯ ಹಿಂದೂ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.

ಬೂದುಗುಂಪಾದ ಕೊಟ್ಟೂರು ಶಾಖಾಮಠದ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಯಾವುದೇ ಪಕ್ಷ ಅಥವಾ ಜಾತಿಯ ಭೇದವಿಲ್ಲದೆ ಧರ್ಮ ಮತ್ತು ಸನಾತನ ಸಂಸ್ಕೃತಿಯ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಮಕ್ಕಳಿಗೆ ಮೊಬೈಲ್‌ಗಳ ಬದಲಿಗೆ ಸನಾತನ ಸಂಸ್ಕೃತಿಯ ಪುಸ್ತಕಗಳನ್ನು ನೀಡಬೇಕು. ವ್ಯಕ್ತಿಗಳಿಗಿಂತ ಕಾರ್ಯಕ್ರಮದ ಉದ್ದೇಶಕ್ಕೆ ಮಹತ್ವ ನೀಡಬೇಕು ಎಂದರು.

ಕಾರ್ಯಕ್ರಮದ ಸಂಘಟಕ ಅಯ್ಯನಗೌಡ ಹೇರೂರು ಮಾತನಾಡಿ, ನ.3ರಂದು ಗಂಗಾವತಿಯ ಚನ್ನಬಸವ ತಾತನ ದೇವಾಸ್ಥಾನದಿಂದ ಕಾರ್ಯಕ್ರಮದ ವೇದಿಕೆವರೆಗೆ ಕುಂಭ ಹೊತ್ತ ಮಹಿಳೆಯರಿಂದ ಮೆರವಣಿ ನಡೆಯಲಿದೆ. ಕಾರ್ಯಕ್ರಮ ಯಶಸ್ಸಿಗೆ 14-15 ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು. ಸೋಮನಾಳದ ವಿಜಯಕುಮಾರ ಸ್ವಾಮೀಜಿ, ಮಾಜಿ ಶಾಸಕ ಬಸವರಾಜ ದಢೇಸುಗೂರು, ರಾಜಶೇಖರ ಮಾತನಾಡಿದರು. ಪ್ರಮುಖರಾದ ಮಂಜುನಾಥ ಮೇಗೂರು, ಶಿವಶರಣೇಗೌಡ ಯರಡೋಣಾ ಇತರರಿದ್ದರು. ಶರಣೇಗೌಡ ಬೂದುಗುಂಪಾ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net