ಸಹಬಾಳ್ವೆಗೆ ಸಾಕ್ಷಿಯಾದ ಕೂನಮುದ್ದನಹಳ್ಳಿ

kumamuddanahally2
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಬೆಟ್ಟಗಳ ಮಧ್ಯೆ ಸುತ್ತಲೂ ಮಾವಿನಮರಗಳ ಹಸಿರು ಹೊದ್ದು, ನೂರಾರು ವರ್ಷಗಳ ಇತಿಹಾಸ ಸಾರುತ್ತಾ ಸರ್ವರ ಸಹಬಾಳ್ವೆಗೆ ಸಾಕ್ಷಿಯಾಗಿದೆ ರಾಮನಗರ ತಾಲೂಕಿನ ಕೂಟಗಲ್​ ಹೋಬಳಿಯ ಕೂನಮುದ್ದನಹಳ್ಳಿ ಗ್ರಾಮ.

ಕೂನಮುದ್ದನಹಳ್ಳಿ ಸುಂದರ ಪ್ರಕೃತಿ ವನಸಿರಿ ಮಧ್ಯೆ ಹಚ್ಚ ಹಸಿರು ತುಂಬಿದ ಗ್ರಾಮ. ಗ್ರಾಮದ ನಾಲ್ಕು ಭಾಗಗಳಲ್ಲಿ ಯತಿರಾಜಸ್ವಾಮಿಬೆಟ್ಟ, ದೇವತ್​ಕಲ್​ಬೆಟ್ಟ, ಸೊಪ್ಪಿನಬೆಟ್ಟ, ಕೀರಗುಡ್ಡೆ ಬೆಟ್ಟಗಳಿದ್ದು, ಸುತ್ತಲೂ ಬೆಟ್ಟ ಗುಡ್ಡಗಳು ಆವೃತವಾಗಿ, ನೂರಾರು ವರ್ಷಗಳ ಇತಿಹಾಸ ಸಾರುತ್ತ ರಾಜಕೀಯ, ಧಾರ್ಮಿಕ, ಶೈಕ್ಷಣಿಕವಾಗಿ ಗ್ರಾಮ ಗುರುತಿಸಿಕೊಂಡಿದೆ.

ರಾಮನಗರ ಜಿಲ್ಲಾ ಕೇಂದ್ರದಿಂದ 8 ಕಿಮೀ ಅಂತರದಲ್ಲಿದೆ. ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು, ಬಿಳಗುಂಬ ಮಾರ್ಗ ಮತ್ತು ಮಾಗಡಿ ಪಾದ್ರಳ್ಳಿ ರಸ್ತೆಗಳಿಂದ ಗ್ರಾಮಕ್ಕೆ ಎರಡೂ ಕಡೆಗಳಿಂದ ಸಂಪರ್ಕವಿದೆ. ಮಣ್ಣಿನ ಬೀದಿ ರಸ್ತೆ, ಎತ್ತ ನೋಡಿದರೂ ನಾಡಹೆಂಚಿನ ಮಣ್ಣಿನ ಗೋಡೆಗಳಿಂದ ಕೂಡಿದ ಮನೆಗಳು ಈಗ ಕಾಂಕ್ರೀಟ್​ ಮನೆಗಳಾಗಿವೆ. ನೀರಾವರಿ ಸೌಲಭ್ಯ ಹೆಚ್ಚಿಲ್ಲ, ಮಳೆಯಾಶ್ರಿತ ಕೃಷಿ ಪ್ರದೇಶವೇ ಹೆಚ್ಚು. ಮಾವು ಗ್ರಾಮದ ರೈತರ ಪ್ರಮುಖ ವಾಣಿಜ್ಯ ಬೆಳೆ ತೆಂಗು, ರೇಷ್ಮೆ, ರಾಗಿ ಪ್ರಮುಖ ಬೆಳೆಗಳಾಗಿವೆ.

ಕೈ ಹಿಡಿದ ಹೈನುಗಾರಿಕೆ

ಗ್ರಾಮದಲ್ಲಿ ಸುಮಾರು 1500 ಜನಸಂಖ್ಯೆ ಇದ್ದು, ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ, ಹಾಲಿನ ಡೇರಿ ಇದೆ. ಸಾಕಷ್ಟು ಜನರಿಗೆ ಹೈನುಗಾರಿಕೆಯೇ ಬೆನ್ನೆಲುಬಾಗಿದೆ.

ರಾಮನ ಪಾದ

ಗ್ರಾಮದ ಸಮೀಪ ಲಿಂಗೇಗೌಡನದೊಡ್ಡಿ ರಸ್ತೆಯಲ್ಲಿ ಕಲ್ಲಿನ ಬಂಡೆ ಮೇಲೆ ರಾಮನ ಪಾದವಿದೆ. ರಾಮದೇವರ ಬೆಟ್ಟಕ್ಕೂ ಇಲ್ಲಿಗೂ ನಂಟಿದೆ ಎಂದು ಹೇಳಲಾಗಿದೆ. ಜತೆಗೆ ಗ್ರಾಮದ ಅಕ್ಕಪಕ್ಕ ಪಾಂಡವರು ವಾಸ ಮಾಡುತ್ತಿದ್ದ ಸ್ಥಳಗಳ ಗುರುತುಗಳಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಗ್ರಾಮದ ಇತಿಹಾಸ

ಹಿಂದೆ ಗೂನ ಮತ್ತು ಮುದ್ದ ಎಂಬುವವರು ಇದ್ದರಂತೆ. ಇವರು ಅಕ್ಕಪಕ್ಕದ ಗ್ರಾಮಗಳಲ್ಲಿ ಚಿರಪರಿಚಿತರಾಗಿದ್ದ ಕಾರಣ ಇವರ ಕಾಲಾನಂತರ ಜನರು ಗೂನಮುದ್ದನಹಳ್ಳಿ ಎಂದು ಕರೆಯುತ್ತಾ ಬಂದರಂತೆ. ನಂತರ ಅದು ಆಡು ಭಾಷೆಯಲ್ಲಿ ಕೂನಮುದ್ದನಹಳ್ಳಿಯಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ಒಂದು ವಾರ ಹಬ್ಬ

ಗ್ರಾಮದಲ್ಲಿ ಮಲೈಮಹದೇಶ್ವರ, ಬಸವೇಶ್ವರ, ಶನಿಮಹಾತ್ಮ, ಮಾರಮ್ಮ, ಆಂಜನೇಯ ಗ್ರಾಮ ದೇವತೆಗಳ ದೇವಾಲಯಗಳಿವೆ. ಪ್ರತಿ ವರ್ಷ ಏಪ್ರಿಲ್​, ಮೇನಲ್ಲಿ ಮಹದೇಶ್ವರ, ಬಸವೇಶ್ವರ ಅಗ್ನಿಕೊಂಡ, ಪರ, ಉತ್ಸವಾದಿಗಳು ಒಂದು ವಾರ ವೈಭವವಾಗಿ ನಡೆಯುತ್ತವೆ.

ನೀರಿನ ಬರ ನೀಗಿಸಿದ ಕೆರೆಗಳು

ಗ್ರಾಮದಲ್ಲಿ ರೈತಾಪಿ ಕುಟುಂಬಗಳೇ ಹೆಚ್ಚು. ಮಾವು ಬೆಳೆಯೂ ಹೆಚ್ಚಿದೆ. ಅಲ್ಪ ಸ್ವಲ್ಪ ನೀರಾವರಿ ಪ್ರದೇಶ ವಿಸ್ತರಣೆ ಮಾಡಿಕೊಂಡಿರುವ ರೈತರು ಬೋರ್​ವೆಲ್​ ಕೊರೆಸಿಕೊಂಡು ತೆಂಗು, ಜಾನುವಾರು ಮೇವು, ರೇಷ್ಮೆ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿನ ದಾಸನಕಟ್ಟೆ, ಐನೋರಕಟ್ಟೆ, ಯಡಿಯೂರಪ್ಪನಕಟ್ಟೆ, ಜಂಕ್ಲರೆ ಕೆರೆಗಳಿದ್ದು, ರೈತರಿಗೆ ಪೂರಕವಾಗಿ ಅಂತರ್ಜಲಮಟ್ಟ ಸುಧಾರಣೆಗೆ ಸಹಕಾರಿಯಾಗಿವೆ. ಜತೆಗೆ ನೀರಿನ ಬವಣೆ ತಪ್ಪಿಸಿವೆ.

ಮಾವು ವ್ಯಾಪಾರ

ಹೆಚ್ಚಾಗಿ ಮಾವು ಬೆಳೆಯುವ ರೈತರಿರುವ ಗ್ರಾಮ ಇದಾಗಿದ್ದು, ಗ್ರಾಮದ ಬಹುಪಾಲು ರೈತರು ಮಾವು ವ್ಯಾಪಾರದಲ್ಲೂ ತೊಡಗಿಸಿಕೊಂಡಿದ್ದಾರೆ. ತೋಟಗಳ ಜತೆಗೆ ಸುತ್ತಮುತ್ತಲ ಗ್ರಾಮಗಳ ರೈತರ ಮಾವಿನ ತೋಟಗಳನ್ನು ಗುತ್ತಿಗೆ ಪಡೆದು ಮಾವು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಸ್ವಾಮೀಜಿ ಪ್ರತಿಮೆ

ಗ್ರಾಮದಲ್ಲಿ ಸಿದ್ಧಗಂಗಾ ಶ್ರೀ ಶಿವಕುಮಾರಸ್ವಾಮೀಜಿ ಭಕ್ತರಿದ್ದು, ಗ್ರಾಮದ ಸರ್ಕಲ್​ಗೆ ಶಿವಕುಮಾರಸ್ವಾಮೀಜಿ ವೃತ್ತ ಎಂದು ಹೆಸರಿಟ್ಟು ಮೂರು ವರ್ಷಗಳ ಹಿಂದೆ ಸ್ವಾಮೀಜಿ ಪ್ರತಿಮೆ ಅನಾವರಣ ಮಾಡಿದ್ದಾರೆ.

ಉನ್ನತ ಸ್ಥಾನ

ಗ್ರಾಮದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದವರೂ ಇದ್ದು, ಜಿಲ್ಲಾಧಿಕಾರಿ ಸೇರಿ ಸರ್ಕಾರದ ವಿವಿಧ ಉನ್ನತ ಹುದ್ದೆಗಳಲ್ಲಿದ್ದು, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ, ಪೊಲೀಸ್​ ಮತ್ತು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿದಿರು ಬುಟ್ಟಿಗೆ ಹೆಸರುವಾಸಿ

ಗ್ರಾಮದ ಅಕ್ಕಪಕ್ಕ ಬಿದಿರು ಹೆಚ್ಚಿನ ರೀತಿಯಲ್ಲಿ ಇದ್ದ ಕಾರಣ, ಕೆಲವು ಕುಟುಂಬಗಳು ಬಿದಿರು ಬುಟ್ಟಿ, ಏಣಿ ಮಾಡುತ್ತಾ ಸುತ್ತಮತ್ತಲ ಗ್ರಾಮಗಳಿಗೆ ಹೋಗಿ ಮಾರಾಟ ಮಾಡಿ ಜೀವನ ಕಟ್ಟಿಕೊಂಡಿದ್ದರು. ಆದರೆ, ಕಾಲಾಂತರದಲ್ಲಿ ಪ್ಲಾಸ್ಟಿಕ್​ ಹೊಕ್ಕಿದ ಪರಿಣಾಮ ಬಿದಿರು ಪದಾರ್ಥಗಳಿಗೆ ಬೇಡಿಕೆ ಇಲ್ಲದ ಕಾರಣ ಆ ಕೆಲಸ ಬಿಟ್ಟು ಮೇಕೆ, ಕುರಿ ಸಾಕಣೆ ಹೈನುಗಾರಿಕೆಯತ್ತ ಮುಖಮಾಡಿದ್ದಾರೆ.

ಶ್ರೀರಾಮ ಪಾದಸ್ಪರ್ಶ ಮಾಡಿದ ಸ್ಥಳದ ಯತಿರಾಜಸ್ವಾಮಿ ಬೆಟ್ಟದಡಿ ಗ್ರಾಮವಿದೆ. ಗ್ರಾಮದ ಜನರು ಯಾವುದೇ ದ್ವೇಷ, ಅಸೂಯೆ ಇಲ್ಲದೆ ಅನ್ಯೋನ್ಯವಾಗಿ ಜೀವನ ನಡೆಸುತ್ತಾ ಬಂದಿದ್ದೇವೆ. ಇಂತಹ ಪುಣ್ಯ ನೆಲದಲ್ಲಿ ಜನ್ಮ ತಾಳಿ ನಾವು ಜೀವನ ನಡೆಸುತ್ತಿರುವುದೇ ನಮ್ಮ ಸೌಭಾಗ್ಯ. ಕೆ.ಎಸ್​. ರುದ್ರೇಶ್​ಗ್ರಾಪಂ ಮಾಜಿ ಸದಸ್ಯ, ಕೂನಮುದ್ದನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net