ಕೂಡಲಕುಪ್ಪೆ ಹೊಸ ಬಡಾವಣೆಗಿಲ್ಲ ಮೂಲ ಸೌಕರ್ಯ

SRP_16-01jpj
Published on

ಶ್ರೀರಂಗಪಟ್ಟಣ: ತಾಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣಗೊಂಡ ಬಡಾವಣೆಗೆ ರಸ್ತೆ ಹಾಗೂ ಚರಂಡಿ ಸೌಲಭ್ಯಗಳಿಲ್ಲದ ಕಾರಣ ರಸ್ತೆಯಲ್ಲೇ ಮಳೆ ನೀರಿನೊಂದಿಗೆ ಚರಂಡಿಗಳ ಮಲಿನ ನೀರು ನಿಂತು ಸಾಂಕ್ರಾಮಿಕ ರೋಗಗಳ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಗೊಂಡಿದೆ.


ಗ್ರಾಮದ ಸರ್ವೇ ನಂ.ಜಮೀನುಗಳಲ್ಲಿ ಕಳೆದ 8 ವರ್ಷಗಳಿಂದೀಚೆಗೆ ಗ್ರಾಮದ ಕೆಲ ಗ್ರಾಮಸ್ಥರು ಏಳೆಂಟು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಅವುಗಳಲ್ಲಿ 4 ಮನೆಗಳಿಗೆ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ 11ಬಿ ಅಡಿಯಲ್ಲಿ ಸಾಲಸೌಲಭ್ಯದ ಅನುದಾನವನ್ನೂ ನೀಡಿದ್ದು ಸಂಚರಿಸಲು 15 ಅಡಿ ಅಗಲದ ರಸ್ತೆಯನ್ನು ಬಿಡಲಾಗಿದೆ. ಆದರೆ ಇಂತಹ ನಿವಾಸಿಗಳ ಅನೂಕೂಲಕ್ಕೆ ಗ್ರಾಮ ಪಂಚಾಯಿತಿ ಯಾವುದೇ ಚರಂಡಿ ಹಾಗೂ ರಸ್ತೆ ನಿರ್ಮಾಣ ಮಾಡಿಕೊಡದ ಹಿನ್ನೆಲೆ ಮಳೆ ಸುರಿದಾಗ ಸಂಪೂರ್ಣ ರಸ್ತೆ ಕೆಸರು ಗದ್ದೆಯಂತಾಗುವುದು ಮಾತ್ರವಲ್ಲದೆ, ಈ ರಸ್ತೆ ಮೂಲಕವೇ ಸಾಕಷ್ಟು ಗ್ರಾಮಸ್ಥರು ತಮ್ಮ ಕೃಷಿ ಭೂಮಿಗಳಿಗೆ ಜಾನುವಾರುಗಳೊಂದಿಗೆ ತೆರಳುವ ಕಾರಣ ಇರುವ ಮಣ್ಣಿನ ರಸ್ತೆ ಇನ್ನಷ್ಟು ಹಾಳಾಗಿದೆ. ಇಂತಹ ರಸ್ತೆಯಲ್ಲಿ ಇದೀಗ ಅಲ್ಲಲ್ಲಿ ಮಂಡಿಯುದ್ದ ನೀರು ನಿಂತು ಸೊಳ್ಳೆ, ನೊಣಗಳು ಹಾಗೂ ಕ್ರಿಮಿಕೀಟಗಳ ಉತ್ಪತ್ತಿ ಕೇಂದ್ರವಾಗಿ ದುರ್ನಾತ ಬೀರುತ್ತಿದೆ. ಈ ಬಡಾವಣೆಗೆ ಚರಂಡಿ ಹಾಗೂ ರಸ್ತೆ ನಿರ್ಮಿಸಿಕೊಡುವಂತೆ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿಗಳಿಗೆ ಸಾಕಷ್ಟು ವರ್ಷಗಳಿಂದ ಮನವಿ ಮಾಡಿದ್ದರೂ ಕ್ರಿಯಾ ಯೋಜನೆಗೆ ಸೇರಿಸಲು ನಿರ್ಲಕ್ಷಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಎದುರಾಗಿರುವ ಸಮಸ್ಯೆಗಳಿಂದ ಇದೀಗ ತಮ್ಮ ಪುಟ್ಟ ಮಕ್ಕಳೊಂದಿಗೆ ತಮಗೂ ಡೆಂೆ, ಚಿಕೂನ್‌ಗುನ್ಯಾ ಸೇರಿದಂತೆ ವಿವಿಧ ರೋಗ ರುಜಿನಗಳಿಗೆ ತುತ್ತಾಗುವ ಭೀತಿಯಿಂದ ಮನೆಯಲ್ಲಿ ವಾಸಿಸುತ್ತಿರುವುದಾಗಿ ನಿವಾಸಿಗಳಾದ ಆಶಾ, ಶಿವಕುಮಾರ್, ಶಿವಪ್ರಸಾದ್ ಇತರರು ಆತಂಕ ವ್ಯಕ್ತಪಡಿಸಿದರು.


ಈ ಸಂಬಂಧ ಪ್ರತಿಕ್ರಿಯಿಸಿರುವ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸುರೇಶ್ ಕುಮಾರ್, ತಾವು ಇತ್ತೀಚೆಗೆ ಈ ವ್ಯಾಪ್ತಿಯ ಪಿಡಿಒ ಆಗಿ ನೇಮಕಗೊಂಡಿದ್ದು, ಸಮಸ್ಯೆ ಪರಿಶೀಲಿಸಲಾಗಿ ಅಲ್ಲಿನ ನಿವಾಸಿಗಳು ಸರ್ವೇ ನಂ.ಜಮೀನಿನ ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಗ್ರಾಪಂ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ನರೇಗಾ ಯೋಜನೆಯಲ್ಲಿ ಅಲ್ಲಿನ ನಿವಾಸಿಗಳೇ ತಮ್ಮ ಬಡಾವಣೆಗೆ ಚರಂಡಿ ಹಾಗೂ ರಸ್ತೆ ನಿರ್ಮಿಸಿಕೊಂಡಲ್ಲಿ ಅದಕ್ಕೆ ತಗುಲುವ ವೆಚ್ಚವನ್ನು ಗ್ರಾಪಂ ನೀಡುತ್ತದೆ. ಆಗಬೇಕಿರುವ ಕಾಮಗಾರಿ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಮುಂದೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net