

ಕಾರವಾರ: ಐತಿಹಾಸಿಕ ಭಾಷೆ ಕೊಂಕಣಿಯನ್ನು ಉಳಿಸಿ, ಬೆಳೆಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೊಕಿಮ್ ಸ್ಟೆನಿ ಅಲ್ವಾರೆಸ್ ಹೇಳಿದರು.
ನಗರದ ಈಡನ್ ಹೋಟೆಲ್‌ನಲ್ಲಿ ಕಾರವಾರದ ಕೊಂಕಣಿ ಸಾಹಿತಿಗಳು, ಗಣ್ಯರು, ವಿವಿಧ ಸಮಾಜಗಳ ಪ್ರಮುಖರ ಸಭೆ ನಡೆಸಿ ಅವರು ಮಾತನಾಡಿದರು. ಸರಸ್ವತಿ ನದಿ ತೀರದಲ್ಲಿ ಸುಮಾರು 10 ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿರುವುದು ಕೊಂಕಣಿ ಭಾಷೆಯಾಗಿದೆ. ಕಾರವಾರ ನಗರವು ಕೊಂಕಣಿ ಭಾಷೆಯ ಕೇಂದ್ರವಾಗಿದೆ. ಭಾಷೆಯನ್ನು ಉತ್ತೇಜಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಭಾರತ ಮಾತಾ ಮಂದಿರದ ಅಧ್ಯಕ್ಷ ಡಾ. ವಸಂತ ಬಾಂದೇಕರ್, ಮಾತನಾಡಿ, ಕಾರವಾರ ನಗರದಲ್ಲಿ ಹಲವಾರು ಸಾಹಿತಿಗಳು ಕೊಂಕಣಿ ಭಾಷೆಯಲ್ಲಿಯೇ ಪ್ರಸಿದ್ದಿ ಹೊಂದಿ ಪುಸ್ತಕಗಳನ್ನು ಪರಿಚಯಿಸಿದ್ದಾರೆ. ಆದರೆ, ಕೊಂಕಣಿ ಸಾಹಿತ್ಯ ಚಟುವಟಿಕೆಗಳು ಕಡಿಮೆಯಾಗಿವೆ. ವೇದಿಕೆಯೊಂದನ್ನು ರೂಪಿಸಿ ಭಾಭಾ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು ಎಂದರು. ಸಾಮಾಜಿಕ ಕಾರ್ಯಕರ್ತ ಎಡ್ಡಿ ವೆಗಸ್, ಹೊಸ ಪಿಳಿಗೆಗೆ ಭಾಷೆಯನ್ನು ವೃದ್ದಿಸಲು ನಾಟಕ, ಮನರಂಜನೆ ಕಾರ್ಯಕ್ರಮವನ್ನು ಕೊಂಕಣಿ ಭಾಷೆಯಲ್ಲಿ ಆಯೋಜಿಸುವಂತೆ ತಿಳಿಸಿದರು. ವೇದಿಕೆಯಲ್ಲಿ ಮಂಗಳೂರಿನ ನವೀನ ಲೋಬೊ, ಉದ್ಯಮಿಗಳಾದ ಜಾರ್ಜ ಫರ್ನಾಂಡಿಸ್, ಸಾಮ್ಸನ್ ಡಿಸೋಜಾ ಇದ್ದರು. ಅಗೊಸ್ತಿನ್ ನರೋನಾ ಕಾರ್ಯಕ್ರಮ ನಿರೂಪಿಸಿದರು.