

ಮೂಲ್ಕಿ: ಕರಾವಳಿಯ ಜನರಿಗೆ ಸಂಸ್ಕಾರಯುತ ಬದುಕು ನೀಡಿದ ಅತಿಸುಂದರ ಸಾಹಿತ್ಯಮಯ ಕೊಂಕಣಿ ಭಾಷೆಯನ್ನು ಬೆಳೆಸುವ ಕರ್ತವ್ಯ ನಮ್ಮದು. ಯುವ ಸಮಾಜ ಭಾಷೆಯ ಅಭಿವೃದ್ಧಿಗೆ ಕಾರ್ಯಸೂಚಿ ಹಮ್ಮಿಕೊಳ್ಳಬೇಕು ಎಂದು ಮೂಲ್ಕಿ ಇಮ್ಯಾಕ್ಯುಲೇಟ್ ಕಂಸೆಪ್ಶನ್ ಚರ್ಚ್ ಧರ್ಮಗುರು ಫಾ.ಅಂತೋಣಿ ಶೇರಾ ಹೇಳಿದರು.
ಮೂಲ್ಕಿಯ ಸಂತ ಜೋಸೆಫ್ ಸಭಾಭವನದಲ್ಲಿ ಆಯೋಜಿಸಲಾದ, ಕೊಂಕಣಿ ಭಾಷೆ ಸಾಂವಿಧಾನಿಕ ಮಾನ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ಮಾಂಡ್ ಸೊಭಾಣ್ ಸಂಸ್ಥೆ ಕಾರ್ಯದರ್ಶಿ ಕ್ಯಾರನ್ ಮಾಡ್ತಾ ಮಾತನಾಡಿ, 1992ರಲ್ಲಿ ಕೊಂಕಣಿ ಭಾಷೆಗೆ ಸಂವಿಧಾನ 8ನೇ ಪರಿಚ್ಛೇದದಲ್ಲಿ ರಾಷ್ಟ್ರೀಯ ಮಾನ್ಯತೆ ಲಭ್ಯವಾಗಿದ್ದರೂ ಹೊಸ ಬದಲಾವಣೆಗಳು ಆಗುವ ಈ ಸಮಯದಲ್ಲಿ ಕೊಂಕಣಿ ಬರಹ ಓದುವಿಕೆ ಹಾಗೂ ಸಾಹಿತ್ಯ ಕೃಷಿ ಬಹಳ ಹಿಂದುಳಿದಿದೆ. ಮಾತೃಭಾಷೆ ಕೊಂಕಣಿಯನ್ನು ಮನೆಯಲ್ಲಿ ಮಾತನಾಡುವ ಮೂಲಕ ಮಕ್ಕಳಿಗೆ ಅದನ್ನು ಕಲಿಸಿದಲ್ಲಿ ಕೊಂಕಣಿಯ ಸವಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಿದೆ ಎಂದರು.
ಕೊಂಕಣಿಯ ಅಧಿಕೃತ ಧ್ವಜ ಪ್ರತಿಷ್ಠಾಪಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಇಗರ್ಜಿಯ ಪಾಲನಾ ಮಂಡಳಿಯ ಸಾಮಾಜಿಕ ಸಂಪರ್ಕ ಮತ್ತು ಯುವಜನರ ಆಯೋಗದ ವತಿಯಿಂದ ಕಾರ್ಯಕ್ರಮ ನಡೆಯಿತು. ಇಗರ್ಜಿಯ ಪಾಲನಾ ಮಂಡಳಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ ಮತ್ತು ಕಾರ್ಯದರ್ಶಿ ಎಡ್ವಿನ್ ಡಿಸೋಜ ಮತ್ತು ಯುವಜನ ಆಯೋಗದ ಕಾರ್ಯದರ್ಶಿ ಸುರೇಶ್ ಪಿರೇರಾ, ಸಾಮಾಜಿಕ ಸಂಪರ್ಕ ಆಯೋಗದ ಕಾರ್ಯದರ್ಶಿ ಮರಿಟಾ ಡಿಸೋಜ, ಐಸಿವೈಎಂ ಅಧ್ಯಕ್ಷ ಲೊಡ್ ರೋಡ್ರಿಗಸ್ ಉಪಸ್ಥಿತರಿದ್ದರು. ಓಸ್ವಲ್ ಕೊರೆಯಾ ಸ್ವಾಗತಿಸಿದರು. ಲವೀಶ ಅಲ್ಮೇಡಾ ನಿರೂಪಿಸಿದರು.